ADVERTISEMENT

ಯುವಕರು ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 9:05 IST
Last Updated 5 ಅಕ್ಟೋಬರ್ 2012, 9:05 IST

ಬೆಳಗಾವಿ: `ಕ್ರೀಡಾ ಮನೋಧರ್ಮ ಯುವಕರಲ್ಲಿ ಹುಮ್ಮಸ್ಸು ಮೂಡಿಸಿ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸುತ್ತದೆ. ಹೀಗಾಗಿ ಯುವಕರು ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು~ ಎಂದು ಬೆಳಗಾವಿ ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಆರ್. ತೊರವಿ ಹೇಳಿದರು.

ಬೆಳಗಾವಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬೆಳಗಾವಿಯ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಗರದ ಸಿ.ಪಿ.ಇಡಿ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಮತ್ತು ಸೈಕ್ಲಿಂಗ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕ್ರೀಡೆಯಲ್ಲಿ ಸೋಲು- ಗೆಲವು ಅನಿವಾರ್ಯ. ಆ ಬಗ್ಗೆ ಹೆಚ್ಚು ಗಮನ ನೀಡದೆ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಗೆಲವು ಸಾಧಿಸಲು ನಿರಂತರ ಪ್ರಯತ್ನ ಅಗತ್ಯವಿದೆ~ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜೈನ ಸಮೂಹ ಸಂಸ್ಥೆ (ಜೆಜಿಐ) ನಿರ್ದೇಶಕ ಪ್ರೊ. ಉದಯಚಂದ್ರ, `ಗುರುತರ ಸಾಧನೆಯಲ್ಲಿ ಛಲವಿದ್ದರೆ ಗುರಿ ಮುಟ್ಟಲು ಸಾಧ್ಯ. ಆತ್ಮ ವಿಶ್ವಾಸ ಕಳೆದುಕೊಳ್ಳದೆ ಎದುರುಗೊಂಡರೆ, ಯಶಸ್ಸು ನಿಮಗಾಗಿ ಮುಂದೆ ಕಾಯ್ದಿರುತ್ತದೆ~ ಎಂದು ಹೇಳಿದರು.

ಜೈನ ಕಾಲೇಜಿನ ಪ್ರಾಚಾರ್ಯ ಪ್ರೊ. ಎ.ಕೆ. ಜೋಶಿ ಸ್ವಾಗತಿಸಿದರು. ಜಿ.ಎ. ಕಾಲೇಜಿನ ಕ್ರೀಡಾ ನಿರ್ದೇಶಕ ಎಸ್.ವಿ. ಶಿವನಾಯ್ಕರ ಕ್ರೀಡೆಗಳ ಬಗ್ಗೆ ಮಾಹಿತಿ ನೀಡಿದರು. ಜೈನ ಮಹಾವಿದ್ಯಾಲಯದ ದೈಹಿಕ ಉಪನ್ಯಾಸಕ ಜಿತೇಂದ್ರ ಕಾಕತಿಕರ ಹಾಗೂ ಮಿಲಿಂದ ಚವಾಣ ಉಸ್ತವಾರಿ ನಿರ್ವಹಿಸಿದರು.

ಗುಂಡು ಎಸೆತ, ಜಾವೆಲಿನ್ ಥ್ರೊ, 1500 ಮೀಟರ್, 400 ಮೀಟರ್, 100 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ ಸ್ಪರ್ಧೆಗಳು ನಡೆದವು. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕ್ರಾಸ್‌ಕಂಟ್ರಿ ಸ್ಪರ್ಧೆ ನಡೆಯಲಿದ್ದು, ನಂತರ ಸೈಕ್ಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.