ADVERTISEMENT

‘ರಾಜಕಾರಣಿಗಳ ಚೇಲಾಗಳಾಗುವುದು ದುರಂತ’

ನಿಪ್ಪಾಣಿ: ಸಂವಾದದಲ್ಲಿ ಹಿರಿಯ ಚಿಂತಕ ಡಾ. ರಹಮತ್‌ ತರೀಕೆರೆ ಕಳವಳ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 5:29 IST
Last Updated 17 ಏಪ್ರಿಲ್ 2018, 5:29 IST

ನಿಪ್ಪಾಣಿ: ‘ಸಾಹಿತಿಗಳು ಜನಪರ ಕಳಕಳಿಯನ್ನು ಹೊಂದಿದ ಲೇಖನಗಳನ್ನು ಬರೆಯದೆ, ಘನತೆ- ಗೌರವಗಳನ್ನು ಸಂಪಾದಿಸದೆ ಇಂದು ರಾಜಕಾರಣಿಗಳ ಚೇಲಾಗಳಾಗಿರುವುದು ದೊಡ್ಡ ದುರಂತ ಎಂದು ಚಿಂತಕ ಡಾ. ರಹಮತ್‌ ತರೀಕೆರೆ ವಿಷಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಮತ್ತು ಸ್ಥಳೀಯ ಗಡಿನಾಡು ಕನ್ನಡ ಬಳಗದ ಆಶ್ರಯದಲ್ಲಿ ಕೆ.ಎಲ್‌.ಇ. ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಸಮಕಾಲೀನ ವಿದ್ಯಮಾನಗಳು ಮತ್ತು ಬರಹಗಾರರು’ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬರಹಗಾರರ ಮೇಲೆ ಒಂದು ಅತಿದೊಡ್ಡ ಜವಾಬ್ದಾರಿ ಇದ್ದು, ಅದನ್ನು ನಿರ್ವಹಿಸುವಲ್ಲಿ ಸಾಹಿತಿಗಳು ಮತ್ತೆ ಮತ್ತೆ ಎಡವುತ್ತಿದ್ದಾರೆ’ ಎಂದು ವಿಷಾದಿಸಿದರು.
‘ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸದೆ, ಚಳುವಳಿಗಳ ಭಾಗವಾಗಿರದೇ ತಟಸ್ಥವಾಗಿದ್ದು, ತಮ್ಮಷ್ಟಕ್ಕೆ ತಾವು ಬರೆಯುವ ಸಾಹಿತಿಗಳು ನಿಜವಾದ ಸಾಹಿತಿಗಳಲ್ಲ. ಬರಹಗಾರರು ಸಂವೇದನಾಶೀಲರಾಗಿರಬೇಕು. ಎಡಪಂಥೀಯ- ಬಲಪಂಥೀಯ ಯಾವ ವಿಧದಲ್ಲಾದರೂ ಬರೆದುಕೊಳ್ಳಲಿ. ಆದರೆ ಆ ಸಾಹಿತ್ಯ ಅತ್ಯಂತ ಸಂವೇದನಾಶೀಲತೆಯಿಂದ ಕೂಡಿರಬೇಕು. ಸಮಕಾಲೀನ ವಿದ್ಯಮಾನಗಳಿಗೆ ಅತ್ಯಂತ ಜವಾಬ್ದಾರಿತನದಿಂದ ಸ್ಪಂದಿಸುತ್ತಿದ್ದ ಕುವೆಂಪುರವರು ಯಾವ ರಾಜಕಾರಣಿಗಳ ಮುಲಾಜನ್ನೂ ಕಾಯಲಿಲ್ಲ. ಅಂದಿನ ಮುಖ್ಯಮಂತ್ರಿಗಳೇ ಕುವೆಂಪುರವರ ಮುಂದೆ ಕುಳಿತುಕೊಂಡು ಮಾತಾಡುವಷ್ಟು ಧೈರ್ಯ ತೋರುತ್ತಿರಲಿಲ್ಲ’ ಎಂದರು.

ADVERTISEMENT

ಆಶಯನುಡಿಗಳನ್ನಾಡಿದ ಡಾ. ಗುರುಪಾದ ಮರಿಗುದ್ದಿ, ‘ನಮ್ಮ ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಸಂವಾದ ಅತಿ ಮುಖ್ಯವಾದ ಒಂದು ಆಯುಧ. ಭಿನ್ನ ಧ್ವನಿಗಳನ್ನು ನಿಷ್ಕರುಣೆಯಿಂದ ಹತ್ತಿಕ್ಕಲಾಗುತ್ತಿರುವ ಈ ಹೊತ್ತಿನಲ್ಲಿ ನಾವು ಸಂವಾದದ ಮೂಲಕ ಹೊಸ ದೇಶವನ್ನು ಕಟ್ಟಲು ಸಾಧ್ಯವಿದೆ. ಲೇಖಕರಾದವರು ನಿರ್ಲಿಪ್ತರಾಗಿರದೇ ಜನರ ನೋವಿಗೆ ಮಿಡಿಯುವ ಕೆಲಸ ಮಾಡಬೇಕು’ ಎಂದರು.

ಸಾಹಿತಿ ಎಸ್‌.ವೈ. ಹಂಜಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಎಂ.ಬಿ. ಹೂಗಾರ, ಡಾ. ಸುಬ್ರಾವ್‌ ಎಂಟೆತ್ತಿನವರ, ಹಮೀದಾಬೇಗಂ ದೇಸಾಯಿ, ದಯಾನಂದ ನೂಲಿ, ಡಾ. ದೇವೆಂದ್ರ ಬಡಿಗೇರ ಡಾ. ರಹಮತ್ ತರೀಕೆರೆಯವರೊಂದಿಗೆ ಸಂವಾದ ನಡೆಸಿದರು.

ಸುರೇಶ ಕಾನಪೇಟ, ಎಲ್.ವಿ. ಪಾಟೀಲ, ಅಕಬರಅಲಿ ಸನದಿ, ಎಂ.ಎಸ್. ಕುರಬೆಟ್‌, ಸದಾಶಿವ ಕಾಂಬಳೆ, ವಿವೇಕ ಕಾಂಬಳೆ, ಎಂ.ಎಸ್‌. ಮಾಳಗೆ, ವಿದ್ಯಾವತಿ ಜನವಾಡೆ, ಸುರೇಶ ಶೆಟ್ಟಿ, ಎ.ಬಿ. ಚಚಡಿ, ಸಿದ್ದು ಭಜಂತ್ರಿ, ರಾಜು ಕುಬಸದ, ಕೆ.ಬಿ. ಹೊನ್ನಾಯ್ಕ ಉಪಸ್ಥಿತರಿದ್ದರು.

ಕಸಾಪ ಸ್ಥಳೀಯ ತಾಲ್ಲೂಕು ಘಟಕದ ಅಧ್ಯಕ್ಷ ಹಜರತ್ಅಲಿ ದೇಗಿನಾಳ ಸ್ವಾಗತಿಸಿದರು, ಕುಮಾರ ತಳವಾರ ಹೋರಾಟದ ಹಾಡುಗಳನ್ನು ಹಾಡಿದರು, ಎಂ.ಎಸ್. ಖರಾಡೆ ನಿರೂಪಿಸಿದರು, ಬಾಹುಬಲಿ ಲಕ್ಕನ್ನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.