ADVERTISEMENT

`ರಾಷ್ಟ್ರೀಯ ಉದ್ಯೋಗ ನೀತಿ ಅಗತ್ಯ'

ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿಗೆ ಚಿಂತನೆ: `ಮುಖ್ಯಮಂತ್ರಿ' ಚಂದ್ರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:58 IST
Last Updated 1 ಜುಲೈ 2013, 6:58 IST
ಬೆಳಗಾವಿಗೆ ಭಾನುವಾರ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತಿ'್ರ ಚಂದ್ರು ಅವರನ್ನು ಕರ್ನಾಟಕ ಯುವ ವೇದಿಕೆಯ ಕಾರ್ಯಕರ್ತರು ಸತ್ಕರಿಸಿದರು. ಬಸವರಾಜ ಇಟಗಿ, ಯೂನುಸ್ ಹಿರೇಕೋಡಿ, ಅನಂತ ಬ್ಯಾಕೋಡ, ಸಿದ್ಧನಗೌಡ ಪಾಟೀಲ  ಚಿತ್ರದಲ್ಲಿದ್ದಾರೆ.
ಬೆಳಗಾವಿಗೆ ಭಾನುವಾರ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತಿ'್ರ ಚಂದ್ರು ಅವರನ್ನು ಕರ್ನಾಟಕ ಯುವ ವೇದಿಕೆಯ ಕಾರ್ಯಕರ್ತರು ಸತ್ಕರಿಸಿದರು. ಬಸವರಾಜ ಇಟಗಿ, ಯೂನುಸ್ ಹಿರೇಕೋಡಿ, ಅನಂತ ಬ್ಯಾಕೋಡ, ಸಿದ್ಧನಗೌಡ ಪಾಟೀಲ ಚಿತ್ರದಲ್ಲಿದ್ದಾರೆ.   

ಬೆಳಗಾವಿ:  `ಖಾಸಗಿ ವಲಯದಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಒತ್ತಾಯಿಸಿದರು.

ನಗರಕ್ಕೆ ಭಾನುವಾರ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, `ಇಂದು ಸರ್ಕಾರಿ ಕ್ಷೇತ್ರಕ್ಕಿಂತ ಖಾಸಗಿ ಕ್ಷೇತ್ರದಲ್ಲೇ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಹೀಗಾಗಿ ಕನ್ನಡ ಭಾಷೆ ಬಲ್ಲವರಿಗೆ ಐಟಿ- ಬಿಟಿಯಂತಹ ಖಾಸಗಿ ಕಂಪೆನಿಗಳಲ್ಲೂ ಉದ್ಯೋಗ ಮೀಸಲಾತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇವೆ. ಕನ್ನಡ ಭಾಷೆಯ ರಕ್ಷಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದು, ಈ ಬಗ್ಗೆ ಚಿಂತನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದು ತಿಳಿಸಿದರು.

`ಎರಡೂವರೆ ದಶಕಗಳ ಹಿಂದೆ ನೀಡಿದ್ದ ಸರೋಜಿನಿ ಮಹಿಷಿ ವರದಿಯಲ್ಲಿ ಶಿಫಾರಸ್ಸು ಮಾಡಿದ್ದ 53 ಅಂಶಗಳ ಪೈಕಿ 48 ಅನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ಶಿಫಾರಸ್ಸು ಸಲ್ಲಿಸಲಾಗಿತ್ತು. ಅಂದಿಗೆ ತಕ್ಕಂತೆ ಸಂಬಳ, ಸಾರಿಗೆ ಭತ್ಯೆ ನಿಗದಿ ಪಡಿಸಲಾಗಿತ್ತು. ಎ ಹಾಗೂ ಬಿ ಗ್ರೂಪ್ ನೌಕರಿಯಲ್ಲಿ ಶೇ. 65ರಷ್ಟನ್ನು ಕನ್ನಡಿಗರಿಗೆ ಮೀಸಲು ಇಡುವಂತೆ ಸಲಹೆ ನೀಡಿತ್ತು. ಹೀಗಾಗಿ ಇಂದು ವರದಿಯಲ್ಲಿ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ವರದಿ ಪರಿಶೀಲಿಸಬೇಕು. ಅದರ ಶಿಫಾರಸ್ಸನ್ನು ಆಧರಿಸಿ ಕೂಡಲೇ ವರದಿಯನ್ನು ಅನುಷ್ಠಾನಗೊಳಿಸಬೇಕು' ಎಂದು ಚಂದ್ರು ಒತ್ತಾಯಿಸಿದರು.

`ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಅದು ಜಾರಿಗೆ ಬಂದರೆ, ಆಯಾ ರಾಜ್ಯಗಳ ಭಾಷೆ ಬಲ್ಲವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಸಾಧ್ಯವಾಗುತ್ತದೆ' ಎಂದ ಅವರು, `ರೈಲ್ವೆ ಇಲಾಖೆಯಲ್ಲಿ ಡಿ ಹಾಗೂ ಸಿ ಗ್ರೂಪ್ ನೌಕರರನ್ನು ಸ್ಥಳೀಯ ಭಾಷೆ ಬಲ್ಲವರನ್ನೇ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತಾಗಬೇಕು' ಎಂದು ಅಭಿಪ್ರಾಯಪಟ್ಟರು. 

`ಕರ್ನಾಟಕದಲ್ಲಿ ಸಂಪೂರ್ಣ ಕನ್ನಡವೇ ಬೇಕು ಎಂದು ವಾದ ಮಾಡಿದರೆ ತಪ್ಪಾಗುತ್ತದೆ. ಜಾಗತೀಕರಣ, ಉದಾರೀಕರಣದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ನಾವು ಯಾವ ರಾಜ್ಯದಲ್ಲಿ ಕೆಲಸ ಮಾಡುತ್ತೇವೆಯೋ, ಆ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು' ಎಂದು ಚಂದ್ರು ಹೇಳಿದರು.

`ಮಾತೃಭಾಷೆಯಲ್ಲೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಹಣವಂತರು ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಏರಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮೇಲ್ಮನವಿ ಸಲ್ಲಿಸಲಾಗುವುದು. ಸಾಧ್ಯವಾದಷ್ಟು ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬುದು ಶಿಕ್ಷಣ ಕಾಯ್ದೆಯಲ್ಲಿ ಉಲ್ಲೇಖವಾಗಿದೆ. ಮಾತೃಭಾಷೆಯಲ್ಲೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬು ಈ ಕಾಯ್ದೆಗೆ ತಿದ್ದುಪಡಿ ತರಬೇಕು' ಎಂದು ಅಭಿಪ್ರಾಯಪಟ್ಟರು.

`1ನೇ ತರಗತಿಯಿಂದ ಒಂದು ವಿಷಯವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಸಲಿ. 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ಮರಾಠಿ, ತಮಿಳು, ಉರ್ದು ಮಾತೃ ಭಾಷೆಯುಳ್ಳವರಿಗೆ ಕನ್ನಡ ಹಾಗೂ ಇಂಗ್ಲಿಷ್ ಅನ್ನು ಕಡ್ಡಾಯವಾಗಿ ಒಂದು ವಿಷಯವನ್ನಾಗಿ ಪಾಠ ಮಾಡುವಂತಾಗಬೇಕು' ಎಂದು ವಾದಿಸಿದರು.

`ಎರಡನೇ ಅವಧಿಗೆ ಪ್ರಾಧಿಕಾರದ ಅಧ್ಯಕ್ಷನಾಗಿರುವ ನನ್ನ ಅಧಿಕಾರ ಅವಧಿ ಇನ್ನೂ ಒಂದು ವರ್ಷ ಇದೆ ಎಂದು ನೂತನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ರಾಜೀನಾಮೆ ನೀಡುವಂತೆ ಅವರಿಂದ ಸೂಚನೆ ಬಂದಿಲ್ಲ. ಹೀಗಾಗಿ ಅಧಿಕಾರದಲ್ಲಿ ಮುಂದುವರಿದಿದ್ದೇನೆ. ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಭೇಟಿ ಮಾಡಿ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವ ಕುರಿತು ಸಮಾಲೋಚನೆ ನಡೆಸಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ' ಎಂದು ತಿಳಿಸಿದರು.

`ಭಾಷೆಯ ನಡುವೆ ವಿವಾದಕ್ಕೆ ಅವಕಾಶ ಕಲ್ಪಿಸಿಕೊಡಬಾರದು. ಜನಪ್ರತಿನಿಧಿಗಳು ಈ ವಿಷಯದಲ್ಲಿ ಸಂಘರ್ಷದ ಹಾದಿಯನ್ನು ಹಿಡಿಯಬಾರದು. ಸೌಹಾರ್ದತೆಯಿಂದ ಮನ ಪರಿವರ್ತನೆ ಮಾಡಬೇಕು' ಎಂದು ಜಿಲ್ಲೆಯ ಶಾಸಕರಿಗೆ ಅವರು ಸಲಹೆ ನೀಡಿದರು.

`ಬೆಳಗಾವಿಯಲ್ಲಿ ನಿರ್ಮಿಸಿರುವ ಗಡಿ ಭವನ ಕಳಪೆ ಗುಣಮಟ್ಟದ್ದಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯನ್ನು ವೇಗವಾಗಿ ಮುಗಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುವುದು' ಎಂದು ತಿಳಿಸಿದರು.

`ಗಡಿ ಭಾಗದಲ್ಲಿರುವ ಬೆಳಗಾವಿ ಜಿಲ್ಲೆಗೆ 8 ಕನ್ನಡ ಭವನವನ್ನು ಮಂಜೂರು ಮಾಡುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ; ಸಂಕೇಶ್ವರದಲ್ಲಿ 5 ಲಕ್ಷ; ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದಲ್ಲಿ ರೂ. 7.50 ಲಕ್ಷ ಹಾಗೂ ಬೆಳಗಾವಿ ತಾಲ್ಲೂಕಿನ ಗೌಂದವಾಡ ಗ್ರಾಮದಲ್ಲಿ ರೂ. 7.50 ಲಕ್ಷ ವೆಚ್ಚದಲ್ಲಿ ಕನ್ನಡ ಭವನವನ್ನು ನಿರ್ಮಿಸಲಾಗಿದೆ. ಬೈಲಹೊಂಗಲ ತಾಲ್ಲೂಕಿನ ಕೆ.ಎನ್. ಮಲ್ಲಾಪುರದಲ್ಲಿ ರೂ. 7.50 ಲಕ್ಷದ ಕಾಮಗಾರಿ ಆರಂಭವಾಗಿದೆ. ರೂ. 10 ಲಕ್ಷ ವೆಚ್ಚದ ಕನ್ನಡ ಭವನದ ಕಾಮಗಾರಿಗೆ ಹತ್ತರಗಿ ಗ್ರಾಮದಲ್ಲಿ ಪ್ರಗತಿಯಲ್ಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ವಿವರಿಸಿದರು.

ಸವದತ್ತಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸ್ಥಳ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಖಾನಾಪುರದ ಇಟಗಿ ಗ್ರಾಮದಲ್ಲಿ ಕನ್ನಡ ಭವನ ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಕನ್ನಡ ಭವನವನ್ನು ನಿರ್ಮಿಸಿದ ಬಳಿಕ ನಿರ್ವಹಣೆಗೆ ಜಿಲ್ಲಾಡಳಿತಕ್ಕೆ ನೀಡಲಾಗುವುದು' ಎಂದೂ ಮಾಹಿತಿ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.