ADVERTISEMENT

ರೈಲ್ವೆ ಮೇಲು ಸೇತುವೆ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:20 IST
Last Updated 2 ಅಕ್ಟೋಬರ್ 2012, 5:20 IST

ಬೆಳಗಾವಿ: `ನಗರದಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡದಿರುವುದರಿಂದ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ನೀಡುವ ಮೂಲಕ ಕೆಲಸವನ್ನು ಕೈಗೆತ್ತಿಕೊಳ್ಳಬೇಕು~ ಎಂದು ಚಿಕ್ಕೋಡಿ- ಸದಲಗಾ ಕ್ಷೇತ್ರದ ಶಾಸಕ ಪ್ರಕಾಶ ಹುಕ್ಕೇರಿ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಒತ್ತಾಯಿಸಿದರು.

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, `ಯಶವಂತಪುರ-ಮೀರಜ್-ಯಶವಂತಪುರ ವಿಶೇಷ ರೈಲಿಗೆ (ನಂ. 06517/ 06518) ಚಾಲನೆ ನೀಡಲು ಮಂಗಳವಾರ ನಗರಕ್ಕೆ ಆಗಮಿಸಲಿರುವ ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಕೂಡಲೇ ರೈಲ್ವೆ ಮೇಲು ಸೇತುವೆ ನಿರ್ಮಿಸುವ ಅಗತ್ಯತೆ ಕುರಿತು ಮಾಹಿತಿ ನೀಡಲಾಗುವುದು. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡದಿದ್ದರೆ, ಕೇಂದ್ರವೇ ಸಂಪೂರ್ಣ ವೆಚ್ಚವನ್ನು ನೀಡಿದ್ದರೂ ಕಾಮಗಾರಿ ಕೈಗೊಳ್ಳುವಂತೆ ಒತ್ತಡ ಹೇರಲಾಗುವುದು~ ಎಂದು ತಿಳಿಸಿದರು.

`ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬೀಳುತ್ತಿದ್ದ ತೀವ್ರ ಒತ್ತಡವನ್ನು ಕಡಿಮೆ ಮಾಡಲು ಹೊಸ ರೈಲನ್ನು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಸಚಿವರು ಈಡೇರಿಸಿದ್ದಾರೆ. ಸಚಿವ ಮುನಿಯಪ್ಪ ಅವರು ಅ. 2ರಂದು ಬೆಳಿಗ್ಗೆ 11.30ಕ್ಕೆ ಮೀರಜ್‌ನಿಂದ ಹೊರಡಲಿರುವ `ಯಶವಂತಪುರ-ಮೀರಜ್- ಯಶವಂತಪುರ~ ವಿಶೇಷ ರೈಲಿಗೆ ಬೆಳಗಾವಿಯಲ್ಲಿ ರಿಮೋಟ್ ಮೂಲಕ ಚಾಲನೆ ನೀಡಲಿದ್ದಾರೆ.
 
ಬಳಿಕ ಮಧ್ಯಾಹ್ನ 1.42ಕ್ಕೆ ಬೆಳಗಾವಿಗೆ ಆಗಮಿಸುವ ರೈಲನ್ನು ಸ್ವಾಗತಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ ಸುರೇಶ ಅಂಗಡಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಫಿರೋಜ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ~ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದರು.

`ವಾರದಲ್ಲಿ ಮೂರು ದಿನಗಳ ಕಾಲ ಸಂಚರಿಸಲಿರುವ ಈ ರೈಲು ಸದ್ಯ ಸಂಜೆ 6.20ಕ್ಕೆ ಮೀರಜ್‌ನಿಂದ ಹೊರಟು ಬೆಳಗಾವಿಗೆ ಸಂಜೆ7ಕ್ಕೆ ಬರಲಿದೆ. ಇದೇ ಸಮಯದಲ್ಲಿ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ಸಹ ಸಂಚರಿಸಲಿದೆ. ಹೀಗಾಗಿ ಈ ನೂತನ ರೈಲು ಬೆಳಗಾವಿಯಿಂದ ರಾತ್ರಿ 8 ಗಂಟೆಗೆ ಹೊರಡಬೇಕು.

ಅದೇ ರೀತಿ ಯಶವಂತಪುರದಿಂದ ಬರುವ ರೈಲು ಬೆಳಗಾವಿಗೆ ಬೆಳಿಗ್ಗೆ 6 ಗಂಟೆಗೆ ತಲುಪಬೇಕು. ಅಲ್ಲದೇ ಮೀರಜ್‌ಗೆ ಬೆಳಿಗ್ಗೆ 10.15ರ ಬದಲು ಬೆಳಿಗ್ಗೆ 9 ಗಂಟೆಗೆ ತಲುಪಿದರೆ, ಮುಂಬೈಗೆ ರೈಲಿನ ಸಂಪರ್ಕ ದೊರೆಯಲಿದೆ. ಹೀಗಾಗಿ ಈ ರೀತಿಯ ಬದಲಾವಣೆ ಮಾಡುವಂತೆ ಸಚಿವ ಮುನಿಯಪ್ಪ ಅವರಿಗೆ ಮನವಿ ಮಾಡಲಾಗುವುದು~ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದರು. `ಈ ವಿಶೇಷ ರೈಲು ಮಂಜೂರು ಮಾಡಿಸುವುದರಲ್ಲಿ ಶಾಸಕ ಪ್ರಕಾಶ ಹುಕ್ಕೇರಿಯವರ ಪಾತ್ರವೇ ಮುಖ್ಯವಾಗಿದೆ.

ಸಂಸದ ಸುರೇಶ ಅಂಗಡಿಯವರು ಬೆಳಗಾವಿ ನಗರದತ್ತ ಆಸಕ್ತಿ ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಂಸದರ ಕೊಡುಗೆ ಏನೂ ಇಲ್ಲ~ ಎಂದು ಶಾಸಕ ಫಿರೋಜ್ ಸೇಠ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.