ಮೂಡಲಗಿ: ‘ರಕ್ತದಾನವು ಮನುಷ್ಯರನ್ನು ರೋಗ ಮುಕ್ತರನ್ನಾಗಿಸಿ, ನವಚೈತನ್ಯವನ್ನು ತುಂಬುತ್ತದೆ’ ಎಂದು ಬೆಂಗಳೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ಎಸ್.ಬಿ. ಕುಲಕರ್ಣಿ ಹೇಳಿದರು.ಇಲ್ಲಿಯ ಕೆ.ಎಚ್. ಸೋನವಾಲ್ಕರ್ ಪ್ರತಿಷ್ಠಾನ, ಜೈಂಟ್ಸ್ ಗ್ರೂಪ್, ಎಂ.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಗೋಕಾಕ ರೋಟರಿ ರಕ್ತ ಭಂಡಾರ ಆಶ್ರಯದಲ್ಲಿ ಕೆ.ಎಚ್. ಸೋನವಾಲ್ಕರ್ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಸ್ಥಳೀಯ ಕೃಷ್ಣಪ್ಪ ಸೋನವಾಲ್ಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬೃಹತ್ ಸ್ವಯೇಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಪ್ರತಿ ವರ್ಷ 5 ಲಕ್ಷ ಯುನಿಟ್ ರಕ್ತದ ಅವಶ್ಯಕತೆಯಿದ್ದು, ಸದ್ಯ 1.50 ಲಕ್ಷ ಯುನಿಟ್‌ರಕ್ತದ ಕೊರತೆ ಇದೆ. ಅದನ್ನು ನೀಗಿಸುವಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯು ಸತತ ಪ್ರಯತ್ನ ಮಾಡುತ್ತಿದೆ’ ಎಂದರು.
‘ರಕ್ತದ ಕೊರತೆಯಿಂದ ಗರ್ಭಿಣಿಯರ ಸಾವನ್ನು ತಪ್ಪಿಸುವುದು ರಕ್ತದಾನದಿಂದ ಸಾಧ್ಯವಿದ್ದು, ರಕ್ತದಾನವನ್ನು ಮಾಡಿ ಸಮಾಜಕ್ಕೆ ಬೆಳಕಾಗಿರಿ’ ಎಂದರು.
‘ಕೆ.ಎಚ್. ಸೋನವಾಲ್ಕರ್ ಪ್ರತಿಷ್ಠಾನ ಮತ್ತು ಜೈಂಟ್ಸ್ ಗ್ರೂಪ್ ಗ್ರಾಮೀಣ ಭಾಗದಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದ್ದು, ಇದನ್ನು ರಾಜ್ಯಪಾಲರ ಗಮನಕ್ಕೆ ತರಲಾಗುತ್ತದೆ’ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷೆ ನಾಗರತ್ನಾ ಯಮಕನಮರಡಿ ಶಿಬಿರವನ್ನು ಉದ್ಘಾಟಿಸಿದರು.
ಅತಿಥಿ ಎಸ್.ಆರ್. ಸೋನವಾಲ್ಕರ್, ಬಿಇಒ ಅಜೀತ ಮನ್ನಿಕೇರಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆ ಚೇರಮನ್ ಎಂ.ಎಚ್. ಸೋನವಾಲ್ಕರ್ ಮಾತನಾಡಿ, ‘ರಕ್ತದಾನ ಶಿಬಿರವನ್ನು ಸಂಘಟಿಸುವುದು ಶ್ರೇಷ್ಠ ಕೆಲಸವಾಗಿದೆ’ ಎಂದರು.ಸಾನ್ನಿಧ್ಯ ವಹಿಸಿದ್ದ ಶ್ರೀಪಾದಬೋಧ ಸ್ವಾಮಿಗಳು ಆಶೀರ್ವಚನ ನೀಡಿದರು.
ಡಾ.ಕೆ.ವಿ. ದಂತಿ, ಡಿ.ಬಿ. ಪಾಟೀಲ, ಜಿ.ಪಂ. ಸದಸ್ಯ ಭೀಮಶಿ ಮಗದುಮ್, ಡಾ. ಭಾರತಿ ಕೋಣಿ, ಡಾ. ಎಮ್.ಎನ್. ಮುಗಳಖೋಡ, ಪಿ.ಎಲ್. ಕಾತರಕಿ ಅತಿಥಿಯಾಗಿದ್ದರು.ಶಾರದಾ ಪಿ. ಸೋನವಾಲ್ಕರ್, ಲಕ್ಷ್ಮೆಬಾಯಿ ಕೆ. ಸೋನವಾಲ್ಕರ್, ಕೆ.ಎಚ್. ಸೋನವಾಲ್ಕರ್ ಪ್ರತಿಷ್ಠಾನ ಅಧ್ಯಕ್ಷ ರಮೇಶ ಪ್ಯಾಟಿಗೌಡರ, ರೋಟರಿಯನ್ ರಾಜಶೇಖರ ಮುನೋಳಿಮಠ, ಪ್ರಾಚಾರ್ಯ ಬಿ.ಸಿ. ಪಾಟೀಲ, ಜೈಂಟ್ಸ್ ಅರುಣ ಪಾಟೀಲ ಮತ್ತಿತರು ಹಾಜರಿದ್ದರು.
ಜೈಂಟ್ಸ್ ಗ್ರುಪ್ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ್ ಸ್ವಾಗತಿಸಿದರು, ವೈಆರ್‌ಸಿ ಸಂಯೋಜಕ ಡಾ. ಆರ್.ಎ. ಶಾಸ್ತ್ರೀಮಠ ನಿರೂಪಿಸಿದರು, ಪ್ರೊ. ಎ.ಪಿ. ರಡ್ಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.