ADVERTISEMENT

‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲ್ಲ ಎನ್ನಲು ಈಶ್ವರಪ್ಪ ಯಾರು?’

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಹೊರಟ್ಟಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 5:03 IST
Last Updated 27 ಮಾರ್ಚ್ 2018, 5:03 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿದರು. ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ಶೇಗುಣಸಿಯ ಮಹಾಂತ ದೇವ, ಹುಕ್ಕೇರಿಯ ಶಿವಬಸವ ಸ್ವಾಮೀಜಿ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಸೋಮವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿದರು. ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ಶೇಗುಣಸಿಯ ಮಹಾಂತ ದೇವ, ಹುಕ್ಕೇರಿಯ ಶಿವಬಸವ ಸ್ವಾಮೀಜಿ ಉಪಸ್ಥಿತರಿದ್ದರು.   

ಬೆಳಗಾವಿ: ‘ಲಿಂಗಾಯತಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವುದಿಲ್ಲವೆಂದು ಹೇಳಲು ಬಿಜೆಪಿಯ ಮುಖಂಡ ಕೆ.ಎಸ್‌. ಈಶ್ವರಪ್ಪ ಯಾರು?’ ಎಂದು ಪ್ರಶ್ನಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಹೊರಟ್ಟಿ, ‘ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಿಕೊಟ್ಟಿದೆ. ಇದರ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕೇ ಹೊರತು ಈಶ್ವರಪ್ಪ ಅಲ್ಲ’ ಎಂದು ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಮಾನ್ಯತೆ ನೀಡದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುವುದು ಖಚಿತ’ ಎಂದರು.

ರಾಜೀನಾಮೆ ನೀಡಿ: ‘ವೀರಶೈವ ಹಾಗೂ ಲಿಂಗಾಯತ ಧರ್ಮದ ನಡುವಿನ ವ್ಯತ್ಯಾಸವು ಗೊತ್ತಿಲ್ಲದೇ ನಾವೆಲ್ಲರೂ ಅಖಿಲ ಭಾರತ ವೀರಶೈವ ಮಹಾಸಭಾದ ಸದಸ್ಯರಾಗಿದ್ದೇವೆ. ಈಗ ವ್ಯತ್ಯಾಸ ಗೊತ್ತಾಗಿದ್ದು, ನಾವು ಲಿಂಗಾಯತರು ಎನ್ನುವುದು ಖಾತರಿಯಾಗಿದೆ. ಯಾರ‍್ಯಾರು ಲಿಂಗಾಯತರಾಗಿದ್ದೀರೋ ಅವರೆಲ್ಲರೂ ವೀರಶೈವ ಮಹಾಸಭಾಕ್ಕೆ ರಾಜೀನಾಮೆ ನೀಡಬೇಕು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯತ್ವ ಪಡೆಯಬೇಕು’ ಎಂದು ಹೇಳಿದರು.

ADVERTISEMENT

ಪಕ್ಷಕ್ಕೆ ಸಂಬಂಧವಿಲ್ಲ: ‘ಕೆಲವು ಸ್ವಾಮೀಜಿಗಳು ಧರ್ಮದ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಬಿಜೆಪಿಗೆ ಮತ ಹಾಕುವಂತೆ ಬಹಿರಂಗವಾಗಿ ಕರೆ ನೀಡುತ್ತಿದ್ದಾರೆ. ಇಂತಹವರಿಗೆ ಜನರೇ ಉತ್ತರಿಸಬೇಕು. ನಾನು ಈ ಹೋರಾಟದಲ್ಲಿ ತೊಡಗಿರುವುದಕ್ಕೂ ನನ್ನ ಪಕ್ಷಕ್ಕೂ (ಜೆಡಿಎಸ್‌) ಸಂಬಂಧವಿಲ್ಲ. ಅಂತಹ ಪ್ರಸಂಗ ಬಂದರೆ ಧರ್ಮಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ’ ಎಂದು ಹೊರಟ್ಟಿ ನುಡಿದರು.

ಭಾವನೆ ಕೆರಳಿಸುವ ಯತ್ನ: ಲಿಂಗಾಯತರು ಪ್ರತ್ಯೇಕವಾದರೆ ಹಿಂದೂ ಧರ್ಮ ಒಡೆದುಹೋಗುತ್ತದೆಂದು ಜನರ ಭಾವನೆಯನ್ನು ಕೆರಳಿಸುವ ಪ್ರಯತ್ನ ನಡೆದಿದೆ. ಜೈನರು, ಸಿಖ್‌ರಿಗೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡಿದ ತಕ್ಷಣ ಅವರೇನು ದೇಶ ಬಿಟ್ಟು ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ನೇಮಕ: ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಅರವಿಂದ ಹರಶೆಟ್ಟಿ ಹಾಗೂ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಸರಳಾ ಹೆರೆಕರ ಅವರನ್ನು ನೇಮಿಸಲಾಯಿತು.

ಹಲವರ ಸಲಹೆ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ, ಬಿ.ವಿ. ಕಟ್ಟಿ, ಲಿಂಗರಾಜ ಪಾಟೀಲ, ಶ್ರುತಿ ಗುಡಸ, ಕೆ.ಬಸವರಾಜ, ಎ.ಬಿ. ಪಾಟೀಲ, ಕರಡಿಗುದ್ದಿ, ಪ್ರೇಮಾ ಅಂಗಡಿ, ಯ.ರು. ಪಾಟೀಲ ಸೇರಿದಂತೆ ಹಲವು ಜನರು ಸಲಹೆ ನೀಡಿದರು.

ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ಶೇಗುಣಸಿಯ ಮಹಾಂತ ದೇವ, ಹುಕ್ಕೇರಿಯ ಶಿವಬಸವ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.