ADVERTISEMENT

ವಿಎಫ್‌ಸಿಗೆ ಲಾಭಾಂಶ ಪಡೆಯುವ ಸಂಭ್ರಮ

ವಿನಾಯಕ ಭಟ್ಟ‌
Published 9 ಅಕ್ಟೋಬರ್ 2011, 7:20 IST
Last Updated 9 ಅಕ್ಟೋಬರ್ 2011, 7:20 IST

ಗ್ರಾಮದಲ್ಲಿ ಸಸಿ ಬೆಳೆಸಿ ಕಾಡು ಸಂರಕ್ಷಿಸಿದ್ದ ಗ್ರಾಮ ಅರಣ್ಯ ಸಮಿತಿಗಳಿಗೆ (ವಿಎಫ್‌ಸಿ) ಇದೀಗ ತಮ್ಮ ಶ್ರಮದ `ಫಲ~ದ ರುಚಿ ಸವಿಯುವ ಸಂಭ್ರಮ. ದಶಕದ ಕಾಲ ತಮ್ಮೂರಿನ ಕಾಡನ್ನು ಪೋಷಿಸಿದ ಸಮಿತಿಗಳ ಸದಸ್ಯರಿಗೆ ಲಾಭಾಂಶ ಪಡೆಯುವ ತವಕ.

ಹೌದು, ಜಿಲ್ಲೆಯ ಖಾನಾಪುರ ತಾಲ್ಲೂಕಿನ ಐದು ಗ್ರಾಮ ಅರಣ್ಯ ಸಮಿತಿಗಳಾದ ನಂದಗಡ ಸಮೀಪದ ಬಿಜಗರ್ಣಿ ವಿಎಫ್‌ಸಿ, ಕಣಕುಂಬಿ- ಗೌಳಿವಾಡದ ವಿಎಫ್‌ಸಿ, ಮಾಸ್ಕೇನಟ್ಟಿ ವಿಎಫ್‌ಸಿ, ಕುರಾಡವಾಡ ವಿಎಫ್‌ಸಿ ಹಾಗೂ ಬಾಳಗುಂದ ವಿಎಫ್‌ಸಿಗೆ ತಮ್ಮ ಶ್ರಮದ `ಫಲ~ ಸವಿಯುವ ಕ್ಷಣ ಇದೀಗ ಒದಗಿ ಬಂದಿದೆ. ಗ್ರಾಮದಲ್ಲಿ ಸಂರಕ್ಷಿಸಿದ್ದ ಹಳೆ ನೆಡುತೋಪುಗಳನ್ನು ಕಟಾವು ಮಾಡಿ ಮಾರಾಟ ಮಾಡಿದ್ದರಿಂದ ಬಂದ ಲಾಭದಲ್ಲಿ ಈ ಐದು ವಿಎಫ್‌ಸಿಗಳು ಒಟ್ಟು ಸುಮಾರು 48 ಲಕ್ಷ ರೂಪಾಯಿ ಪಡೆಯಲಿವೆ.

ಬಿಜಗರ್ಣಿ ವಿಎಫ್‌ಸಿಗೆ ರೂ. 24.90 ಲಕ್ಷ, ಕಣಕುಂಬಿ- ಗೌಳಿವಾಡ ವಿಎಫ್‌ಸಿಗೆ ರೂ. 11.56 ಲಕ್ಷ, ಕುರಾಡವಾಡ ವಿಎಫ್‌ಸಿಗೆ ರೂ. 5.76 ಲಕ್ಷ, ಮಾಸ್ಕೇನಟ್ಟಿ ವಿಎಫ್‌ಸಿಗೆ ರೂ. 3.20 ಲಕ್ಷ, ಬಾಳಗುಂದ ವಿಎಫ್‌ಸಿಗೆ 2.41 ಲಕ್ಷ ರೂಪಾಯಿ ಲಾಭಾಂಶವನ್ನು ಅರಣ್ಯ ಇಲಾಖೆ ಶೀಘ್ರದಲ್ಲೇ ವಿತರಿಸಲಿದೆ.

“ನಮ್ಮ ವಿಎಫ್‌ಸಿ ವ್ಯಾಪ್ತಿಯ 15 ಹೆಕ್ಟೇರ್ ಹಳೆ ನೆಡುತೋಪು ಕಟಾವು ಮಾಡಿದ್ದರಿಂದ ಬಂದ ಆದಾಯದಲ್ಲಿ ರೂ. 24.90 ಲಕ್ಷ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಆದಾಯದಲ್ಲಿ ಸುಮಾರು ರೂ. 12 ಲಕ್ಷದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದು ಸಮಿತಿ ನಿರ್ಣಯ ಕೈಗೊಂಡು ಠರಾವು ಪ್ರತಿಯನ್ನು ಇಲಾಖೆಗೆ ಕಳುಹಿಸಿಕೊಟ್ಟಿದೆ. ಇನ್ನುಳಿದ ಹಣದಲ್ಲಿ ಮತ್ತೆ ನೆಡುತೋಪು ಬೆಳೆಸಲು ನಿರ್ಧರಿಸಿದ್ದೇವೆ” ಎನ್ನುತ್ತಾರೆ ಬಿಜಗರಣಿ ಗ್ರಾಮ ಅರಣ್ಯ ಸಮಿತಿ ಸದಸ್ಯ ಕಾರ್ಯದರ್ಶಿ ವಿಶ್ವನಾಥ ಮಂಗಲಗಟ್ಟಿ.

ಪಾಲಿಸಿದರೆ ಪಾಲು:
ಅರಣ್ಯ ಸಂಪನ್ಮೂಲವನ್ನು ಸಂರಕ್ಷಿಸಿ ಬೆಳೆಸುವ ಹೊಣೆಯನ್ನು ಸ್ಥಳೀಯ ಜನರಿಗೆ ನೀಡಿ, ಅದರ ಲಾಭವನ್ನು ಅವರಿಗೇ ನೀಡುವ ಉದ್ದೇಶದಿಂದ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ ಯೋಜನೆಯಡಿ (ಜೆಎಫ್‌ಪಿಎಂ) ಗ್ರಾಮ ಅರಣ್ಯ ಸಮಿತಿ ರಚನೆಗೆ 1993ರಲ್ಲಿ ಚಾಲನೆ ನೀಡಲಾಯಿತು. ಈ ಯೋಜನೆಯಡಿ ಹಲವೆಡೆ ವಿಎಫ್‌ಸಿಗಳು ಅಸ್ತಿತ್ವಕ್ಕೆ ಬಂದವು.

ನಂತರ 2002ರಲ್ಲಿ ಫೋರೆಸ್ಟ್ ಡೆವಲಪ್‌ಮೆಂಟ್ ಏಜೆನ್ಸಿ (ಎಫ್‌ಡಿಎ) ಯೋಜನೆಯಡಿ ಬೆಳಗಾವಿ ವಿಭಾಗದಲ್ಲಿ 55 ವಿಎಫ್‌ಸಿ ಹಾಗೂ 2005ರಲ್ಲಿ ಜಾರಿಗೆ ಬಂದ `ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣೆ~ (ಕೆಎಸ್‌ಎಫ್‌ಎಂಬಿಸಿ) ಯೋಜನೆಯಡಿ 65 ವಿಎಫ್‌ಸಿಗಳನ್ನು ರಚಿಸಲಾಯಿತು. ಸದ್ಯ ಜಿಲ್ಲೆಯಲ್ಲಿ ಸುಮಾರು 280 ಗ್ರಾಮ ಅರಣ್ಯ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.

`ಪಾಲಿಸಿದರೆ ಪಾಲು~ ಧ್ಯೇಯದಡಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಕಿರು ಅರಣ್ಯ ಉತ್ಪನ್ನಗಳಿಗೆ ವಿಎಫ್‌ಸಿಗಳಿಗೆ ಶೇ. 90ರಷ್ಟು ಪಾಲು ಸಿಗುತ್ತದೆ. ವಿಎಫ್‌ಸಿ ರಚಿಸಿದ ನಂತರ ಬೆಳೆಸಿದ ನೆಡುತೋಪುಗಳಲ್ಲಿ ಶೇ. 75ರಷ್ಟು ಹಾಗೂ ರಚನೆಯ ಪೂರ್ವದಲ್ಲೇ ಇದ್ದ ಹಳೆ ನೆಡುತೋಪಿನಿಂದ ಬರುವ ಆದಾಯದಲ್ಲಿ ಶೇ. 50ರಷ್ಟು ಪಾಲನ್ನು ಸಮಿತಿಗೆ ನೀಡಲಾಗುತ್ತದೆ.

“ಸದ್ಯ ಐದು ವಿಎಫ್‌ಸಿಗಳಿಗೆ ಒಟ್ಟು ಸುಮಾರು 48 ಲಕ್ಷ ರೂಪಾಯಿ ಲಾಭಾಂಶವನ್ನು ಶೀಘ್ರವೇ ಹಂಚುತ್ತೇವೆ. ಜಿಲ್ಲೆಯ ಸುಮಾರು ನೂರು ಗ್ರಾಮ ಅರಣ್ಯ ಸಮಿತಿಗಳ ವ್ಯಾಪ್ತಿಯ ಹಳೆ ನೆಡುತೋಪುಗಳು ಕಟಾವು ಮಾಡಲು ಬರುತ್ತಿವೆ. ಇಲ್ಲಿನ ಹಳೆ ನೆಡುತೋಪು ಕಟಾವು ಮಾಡಿ ಅವುಗಳಿಗೂ ಲಾಭಾಂಶ ಹಂಚಲಾಗುವುದು.
 
ವಿಎಫ್‌ಸಿಗಳು ಈ ಹಣದಲ್ಲಿ ಅರ್ಧದಷ್ಟು ಭಾಗವನ್ನು ಗ್ರಾಮ ಅಭಿವೃದ್ಧಿಗೆ ವಿನಿಯೋಗಿಸಲಿದೆ” ಎಂದು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಹೊಸೂರ `ಪ್ರಜಾವಾಣಿ~ಗೆ ತಿಳಿಸಿದರು.

ಪುನಶ್ಚೇತನಕ್ಕೆ ಕ್ರಮ: ಜಿಲ್ಲೆಯಲ್ಲಿ ಸದ್ಯ ಇರುವ 280 ವಿಎಫ್‌ಸಿಗಳ ಪೈಕಿ ಸುಮಾರು 120 ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆ.ಎಸ್.ಎಫ್‌ಎಂ.ಬಿ.ಸಿ ಯೋಜನೆಯಡಿ ರಚನೆಯಾದ ವಿಎಫ್‌ಸಿಗಳಿಗೆ ಸುತ್ತು ನಿಧಿಯಾಗಿ ತಲಾ 1 ಲಕ್ಷ ರೂಪಾಯಿ ನೀಡಲಾಗಿದೆ. ವಿಎಫ್‌ಸಿಗಳು ಈ ಹಣವನ್ನು ಸ್ವಸಹಾಯ ಸಂಘ ರಚನೆಗೆ, ಸಾಲ ನೀಡಲು ಬಳಸಿಕೊಂಡು ಕಾಲ ಕಾಲಕ್ಕೆ ಆದಾಯವನ್ನು ಪಡೆದುಕೊಳ್ಳುತ್ತಿವೆ. ಆದರೆ, ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ ಯೋಜನೆಯಡಿ ಹಿಂದೆ ರಚನೆಗೊಂಡ ಹಲವು ಸಮಿತಿಗಳು ಆದಾಯ ಇಲ್ಲದೇ ನಿಸ್ತೇಜಗೊಳ್ಳುತ್ತಿವೆ.

ಹೀಗಾಗಿ ನಿಸ್ತೇಜಗೊಂಡ ವಿಎಫ್‌ಸಿಗಳನ್ನು ಪುನಶ್ಚೇತನಗೊಳಿಸಲು ಜಿಲ್ಲೆಯ 25 ಸಮಿತಿಗಳಿಗೆ `ಕ್ಯಾಂಪಾ~ ಅನುದಾನದಡಿ ಕಳೆದ ವರ್ಷ ತಲಾ 55 ಸಾವಿರ ರೂಪಾಯಿ ಅನುದಾನ ನೀಡಲಾಗಿತ್ತು. ಈಗ ಇವುಗಳು ಮತ್ತೆ ಕಾರ್ಯಾರಂಭ ಮಾಡಿವೆ. ಈ ವರ್ಷವೂ ಕ್ಯಾಂಪಾ ಯೋಜನೆಯಡಿ ವಿಎಫ್‌ಸಿಗಳಿಗೆ ಅನುದಾನ ನೀಡುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಇನ್ನು ಮೇಲೆ ಬಿಡಗಡೆಯಾಗಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.