ADVERTISEMENT

ವಿಜಯೋತ್ಸವದಂದು ಜಯಂತಿ ಆಚರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 5:11 IST
Last Updated 16 ಅಕ್ಟೋಬರ್ 2017, 5:11 IST

ಚನ್ನಮ್ಮನ ಕಿತ್ತೂರು: ನಾಡಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿ ಗೆದ್ದ ದಿನವಾದ ಅಕ್ಟೋಬರ್‌ 23 ರಂದು ಚನ್ನಮ್ಮ ಜಯಂತಿ ಆಚರಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿರುವುದು ಕಿತ್ತೂರು ಭಾಗದ ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

‘ಸರ್ಕಾರದ ಉದ್ದೇಶವೇನೋ ಒಳ್ಳೆಯದೇ. ಆದರೆ ವಿಜಯೋತ್ಸವ ದಿನ ಚನ್ನಮ್ಮನ ಜಯಂತಿ (ಜನ್ಮದಿನ) ಎಷ್ಟು ಸಮಂಜಸ’ ಎಂದು ಪ್ರಶ್ನಿಸಿರುವ ನಾಗರಿಕರು ‘ಜನ್ಮದಿನ ಬೇರೆ ಇದೆ. ಹೀಗಾಗಿ ಜನ್ಮದಿನದ ಆಚರಣೆ ಭರದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗೆದ್ದ ಸಂಭ್ರಮಾಚರಣೆಯ ಮುಂದುವರಿಕೆಗೆ ಭವಿಷ್ಯದ ದಿನಗಳಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಈ ಭಾಗದ ಸ್ವಾಮೀಜಿಗಳು, ಸಂಶೋಧಕರು ಮತ್ತು ಗಣ್ಯರು ಪ್ರತಿಕ್ರಿಯಿಸಿದ್ದಾರೆ.

‘ರಾಣಿ ಚನ್ನಮ್ಮನ ಜನ್ಮ ವರ್ಷ ಕ್ರಿ.ಶ. 1778. ಆದರೆ ಇತ್ತೀಚಿಗೆ ಜನ್ಮ ತಿಂಗಳು ನ. 14 ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನ. 14 ರಂದು ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಿಸಿದ ನಿದರ್ಶನ ಇದೆ. ವಿಷಯ ಹೀಗಿರುವಾಗ ಅ. 23 ನ್ನು ವಿಜಯೋತ್ಸವ ದಿನವಾಗಿ ಆಚರಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಜಯಂತ್ಯುತ್ಸವ ಮಾಡುವ ವಿಚಾರವಿದ್ದರೆ ಬೇರೆ ದಿನವನ್ನು ಸರ್ಕಾರ ನಿಗದಿ ಪಡಿಸಬೇಕು’ ಎಂದು ಸಂಶೋಧಕ ಡಾ. ಸಂತೋಷ ಹಾನಗಲ್ ವಿನಂತಿಸಿದರು.

ADVERTISEMENT

‘ರಾಣಿ ಚನ್ನಮ್ಮನ ಬಗ್ಗೆ ಲಂಡನ್‌ನಲ್ಲಿ ಸಾಕಷ್ಟು ದಾಖಲೆಗಳಿವೆ ಎಂದು ದಿವಂಗತ ಡಾ. ಎಂ. ಎಂ. ಕಲಬುರ್ಗಿ ಮಾತನಾಡುತ್ತಿದ್ದರು. ಅವುಗಳನ್ನು ದೇಶಕ್ಕೆ ತಂದು ನೈಜ ಇತಿಹಾಸ ಬೆಳಕಿಗೆ ತರುವ ಅಗತ್ಯವಿದೆ. ಈ ಬಗ್ಗೆ ಸರ್ಕಾರವೂ ಹೆಚ್ಚು ಕಾಳಜಿ ವಹಿಸಬೇಕಾಗಿದೆ’ ಎಂದು ಅವರು ಬಯಸಿದರು.

ಕಿತ್ತೂರು ಸಂಸ್ಥಾನ ಕಲ್ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ‘ಸರ್ಕಾರ ಆದೇಶ ಮಾಡುವ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸಬೇಕಿತ್ತು. ಉತ್ಸವಕ್ಕೂ ಮತ್ತು ಜಯಂತಿಗೂ ಸಾಕಷ್ಟು ವ್ಯತ್ಯಾಸಗಳುಂಟು’ ಎಂದು ನುಡಿದರು.

ಸಾಹಿತಿ ಯ.ರು. ಪಾಟೀಲ ಪ್ರತಿಕ್ರಿಯೆ ನೀಡಿ ‘ಅ. 23 ಬ್ರಿಟಿಷರ ವಿರುದ್ಧ ಯುದ್ಧ ಗೆದ್ದ ದಿನವಾಗಿದೆ. ಇದಕ್ಕೆ ಸಾಕಷ್ಟು ಆಧಾರಗಳಿವೆ. ಅಲ್ಲದೆ ರಾಣಿ ಚನ್ನಮ್ಮ ಜಯಂತಿಯನ್ನು ಈಗಾಗಲೇ ನ. 14 ರಂದು ಆಚರಿಸುತ್ತ ಬರಲಾಗುತ್ತಿದೆ. ಆದ್ದರಿಂದ ವಿಜಯೋತ್ಸವ ದಿನ ಜಯಂತಿ ಆಚರಣೆ ಬೇಡ. ಇತಿಹಾಸ ತಿರುಚುವ ಕೆಲಸವಾಗುವುದೂ ಬೇಡ’ ಎಂದು ಹೇಳಿದರು.

ಕರೆ ಸ್ವೀಕರಿಸದ ಸಚಿವೆ: ಈ ವಿವಾದದ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಕೇಳಲು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.