ADVERTISEMENT

‘ವೀರಶೈವ ಲಿಂಗಾಯತರ ಮತಗಳು ಯಾರ ಸ್ವತ್ತಲ್ಲ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 6:10 IST
Last Updated 9 ಏಪ್ರಿಲ್ 2018, 6:10 IST

ಬೆಳಗಾವಿ: ‘ವೀರಶೈವ ಲಿಂಗಾಯತರು ಪ್ರಜ್ಞಾಪೂರ್ವಕವಾಗಿದ್ದು, ರಾಜಕೀಯ ಜಾಗೃತಿ ಹೊಂದಿದ್ದಾರೆ. ಅವರ ಮತಗಳು ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಕಾರ್ಯದರ್ಶಿ ಕಲ್ಯಾಣರಾವ ಮುಚಳಂಬಿ ಹೇಳಿದ್ದಾರೆ.

ಲಿಂಗಾಯತರು ಕಾಂಗ್ರಸ್ ಪಕ್ಷ ಬೆಂಬಲಿಸಿ ಎಂದು ಲಿಂಗಾಯತ ಮಹಾಸಭಾದ ಮಾತೆ ಮಹಾದೇವಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಲ ಲಿಂಗಾಯತ– ವೀರಶೈವ ಮುಖಂಡರು ಮತಗಳನ್ನು ಗುತ್ತಿಗೆ ಪಡೆದವರಂತೆ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಬೆಂಬಲಿಸುವಂತೆ ಕೆಲವು ಪಂಚಪೀಠಾಧೀಶರು ಹಾಗೂ ಕಾಂಗ್ರೆಸ್ ಬೆಂಬಲಿಸುವಂತೆ ಕೆಲವು ವಿರಕ್ತ ಮಠಾಧೀಶರು ಕರೆ ನೀಡುವುದು ಎಷ್ಟು ಸರಿ’ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

‘ನಮ್ಮ ಮುಖಂಡರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಹೀಗಿರುವಾಗ ಒಂದು ಪಕ್ಷ ಬೆಂಬಲಿಸುವುದು ಎಷ್ಟು ಸರಿ? ಸಮಾಜದ ಪರವಾಗಿ ಹೇಳಿಕೆ ನೀಡಬಾರದು. ಇದರಿಂದ ಸಮಾಜದ ಮೇಲೆ ದುಷ್ಟರಿಣಾಮಗಳು ಆಗುತ್ತವೆ. ಯಾವುದೇ ರಾಜಕೀಯ ಮತ್ತು ಜಾತಿಯ ವ್ಯಕ್ತಿಗಳನ್ನು ಬೆಂಬಲಿಸದೆ, ಪ್ರಾಮಾಣಿಕ ವ್ಯಕ್ತಿ ಆಯ್ಕೆ ಮಾಡಬೇಕು ಎಂದು ಹೇಳಿದರೆ ಮಠಾಧೀಶರ ತೂಕ ಜಾಸ್ತಿಯಾಗುತ್ತದೆ’ ಎಂದಿದ್ದಾರೆ.

‘ಈಗಾಗಲೇ ಸಮಾಜ ವಿಘಟನೆಯತ್ತ ಸಾಗುತ್ತಿದೆ. ಧರ್ಮದಲ್ಲಿ ರಾಜಕೀಯ ಇರಬಾರದು. ಬೇಕಾದರೆ ರಾಜಕೀಯದಲ್ಲಿ ಧರ್ಮ ಇರಲಿ. ಮಠಾಧೀಶರು ರಾಜಕೀಯ ಪ್ರಚಾರಕ್ಕಿಂತ ಧರ್ಮ ಜಾಗೃತಿ ಮಾಡಲಿ. ದುಡುಕಿನ ನಿರ್ಧಾರ ಸಮಂಜಸವಲ್ಲ ಎನ್ನುವುದನ್ನು ಅವರು ತಿಳಿಯಬೇಕು. ವೈಯಕ್ತಿಕ ವಿಚಾರಗಳನ್ನು ಸಾರ್ವತ್ರಿಕಗೊಳಿಸಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.