ADVERTISEMENT

ಸಚಿವರ ವಿಮಾನ ವೆಚ್ಚ ರೂ. 43 ಕೋಟಿ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 9:50 IST
Last Updated 3 ಏಪ್ರಿಲ್ 2012, 9:50 IST

ಬೆಳಗಾವಿ: ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಳೆದ ಮೂರೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ  ಹಾಗೂ ಸಚಿವರುಗಳು ಸಭೆ- ಸಮಾರಂಭಗಳಿಗೆ ವಿಮಾನಗಳಲ್ಲಿ ಹೋಗಲು ವೆಚ್ಚ ಮಾಡಿದ್ದು ಬರೋಬ್ಬರಿ 43.16 ಕೋಟಿ ರೂಪಾಯಿ!

ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸಿದ ಮೂರೂವರೆ ವರ್ಷಗಳ ಅವಧಿಯಲ್ಲಿ ತಮಗೆ ಹಾಗೂ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಉಪಯೋಗಕ್ಕಾಗಿ ವಿಶೇಷ ವಿಮಾನ, ಏರ್‌ಕ್ರಾಫ್ಟ್ ಹಾಗೂ ಹೆಲಿಕಾಪ್ಟರ್‌ಗಳಿಗೆ ಒಟ್ಟು 43,16,11,534 ರೂಪಾಯಿ ಖರ್ಚು ಮಾಡಿದ್ದಾರೆ. 

`2008-09ನೇ ಸಾಲಿನಲ್ಲಿ ರೂ. 8.18 ಕೋಟಿ, 2009-10ನೇ ಸಾಲಿನಲ್ಲಿ ರೂ. 13.45 ಕೋಟಿ ಹಾಗೂ 2010-11ನೇ ಸಾಲಿನಲ್ಲಿ ರೂ. 15.22 ಕೋಟಿ ಮತ್ತು 2011ರಿಂದ ಜುಲೈ 2012ನೇ ಸಾಲಿನವರೆಗೆ 6.29 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ~ ಎಂದು ಜಿಲ್ಲೆಯ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಿವರ ನೀಡಿದ್ದಾರೆ.

“ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಸಭೆ- ಸಮಾರಂಭ ಗಳಿಗಾಗಿ ನೀರಿನಂತೆ ಹಣವನ್ನು ಪೋಲು ಮಾಡುತ್ತಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿಲ್ಲ. ಅನೇಕ ಜಲಾಶಯಗಳಲ್ಲಿನ ಹೂಳು ತೆಗೆಯಲು ಸರ್ಕಾರದ ಬಳಿ ಹಣವಿಲ್ಲ. ಹೀಗಿದ್ದಾಗ ಸಚಿವರು ಸಭೆ-ಸಮಾರಂಭ ಗಳಿಗೆಂದು ವಿಮಾನದಲ್ಲಿ ಹೋಗಿ ಹಣವನ್ನು ದುಂದುವೆಚ್ಚ ಮಾಡುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಭೀಮಪ್ಪ ಗಡಾದ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.