ADVERTISEMENT

ಸಭೆ ಯಶಸ್ವಿ: ತಿರವೀರ ಉಪವಾಸ ವಾಪಸ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 12:40 IST
Last Updated 11 ಡಿಸೆಂಬರ್ 2012, 12:40 IST

ಖಾನಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ವರೆಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದ ಸಮಾಜ ಸೇವಕ ಹಾಗೂ ತೋಪಿನಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಸಂತ ತಿರವೀರ ನಿರಶನವನ್ನು ಹಿಂಪಡೆದಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯ ಸ್ಥಳವನ್ನು ಆಕ್ರಮಿಸಿಕೊಂಡ ಫುಟ್‌ಪಾತ್ ವ್ಯಾಪಾರಸ್ಥರಿಂದ ಅತಿಕ್ರಮಣವನ್ನು ತೆರವುಗೊಳಿಸುವುದು, ಪಟ್ಟಣ ಪಂಚಾಯತಿಯಲ್ಲಿ ಮಾಡಲಾದ ಭ್ರಷ್ಟಾಚಾರದ ತನಿಖೆ ನಡೆಸುವುದು, ಪಟ್ಟಣ ಪಂಚಾಯಿತಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವುದು, ಖಾನಾಪುರದ ತಾ.ಪಂ. ಒಡೆತನದ ಹಳೆ ಕೋರ್ಟ್ ಕಟ್ಟಡವನ್ನು ಕೆಡವಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಇತ್ಯಾದಿ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದರು.

ಪಟ್ಟಣದ ಹೊಸ ಕೋರ್ಟ್‌ನಿಂದ ರುಮೇವಾಡಿ ಕ್ರಾಸ್ ವರೆಗಿನ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಮಾಡುವುದು, ಸರ್ಕಾರಿ ಆಸ್ಪತ್ರೆಯಲ್ಲಿರುವ ರಸ್ತೆ ದುರಸ್ತಿ ಮಾಡುವುದು, ಆಶ್ರಯ ಮನೆಯಲ್ಲಿ ವಾಸವಾಗದ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಮುಂದಾಗಬೇಕು ಎಂದು  ಅವರು ಆಗ್ರಹಿಸಿದ್ದರು.

ಈ ಕುರಿತು ನ.22ರಂದು ತಿರವೀರ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಬೇಡಿಕೆಗಳ ಈಡೇರಿಕೆಗೆ ಡಿ.10ರ ಗಡುವು ನೀಡಿದ್ದರು.

ತಿರವೀರರ ಮನವಿಗೆ ಪಟ್ಟಣ ಪಂಚಾಯಿತಿಯ ಸ್ಪಂದಿಸದ ಕಾರಣ ಡಿ.10 ಸೋಮವಾರ ಮುಂಜಾನೆ ಪಟ್ಟಣ ಪಂಚಾಯತಿಯ ಕಚೇರಿಯ ಎದುರು ಉಪವಾಸವನ್ನು ಆರಂಭಿಸಿದ ಅವರು ಮಧ್ಯಾಹ್ನದ ವೇಳೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ತಮ್ಮ ಉಪವಾಸವನ್ನು ಮೊಟಕುಗೊಳಿಸಿದರು.

ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದ ಒಂದು ವಾರದಿಂದ ವಿಧಾನಸಭೆಯ ಅಧಿವೇಶನದ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ತಮ್ಮ ಮನವಿಯನ್ನು ಪರಿಶೀಲಿಸಲು ಕಾಲಾವಕಾಶವನ್ನು ಕೇಳಿಕೊಂಡಿದ್ದಾರೆ. ಕಾರಣ ತಾತ್ಕಾಲಿಕವಾಗಿ ತಮ್ಮ ಉಪವಾಸವನ್ನು ಹಿಂತೆಗೆದುಕೊಳ್ಳುವುದಾಗಿ  ತಿರವೀರ ಘೋಷಿಸಿದರು. ಈ ಸಂದರ್ಭದಲ್ಲಿ ಪಿಎಸ್‌ಐ ಧೀರಜ ಶಿಂಧೆ, ರವಿ ಕಾಡಗಿ, ಪ್ರಕಾಶ ದೇಶಪಾಂಡೆ, ರಾಜು ಜಾಂಬೋಟಿ, ಪ್ರೇಮಾನಂದ ನಾಯ್ಕ, ಹೊಸಮಠ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.