ADVERTISEMENT

ಸಮತಾ ಸೈನಿಕ ದಳದಿಂದ 25ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 5:30 IST
Last Updated 24 ಜುಲೈ 2012, 5:30 IST

ಬೆಳಗಾವಿ: “ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಲಕ್ಷ್ಮೀಂಪೇಟೆಯಲ್ಲಿ ಐವರು ದಲಿತರ ಕೊಲೆ ಖಂಡಿಸಿ ಸಮತಾ ಸೈನಿಕ ದಳ ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ ವತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜು. 25 ರಂದು ಪ್ರತಿಭಟನೆ ನಡೆಸಲಾಗುವುದು.
 
ಈ ಘಟನೆಗೆ ಕುಮ್ಮಕ್ಕು ನೀಡಿರುವ ಆಂಧ್ರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಪ್ರತಿಕೃತಿ ದಹನ ಮಾಡಲಾಗುವುದು” ಎಂದು ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಿಪೇಟೆಯಲ್ಲಿ ಕಾಪು ಜನಾಂಗದವರು ಕಳೆದ ಜೂ. 12 ರಂದು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಐವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲಿನ ರಾಜ್ಯ ಸರ್ಕಾರ ಈ ಘಟನೆಯನ್ನು ಸಿಐಡಿ ತನಿಖೆ ಒಳಪಡಿಸಿದೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು. ಈ ಘಟನೆಗೆ ಕುಮ್ಮಕ್ಕು ನೀಡಿರುವವರನ್ನು ಬಂಧಿಸಬೇಕು. ಅದಕ್ಕಾಗಿ ಈ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಲಕ್ಷಿಪೇಟೆಯಲ್ಲಿರುವ ಸರ್ಕಾರಿ ಒಡೆತನದ 250 ಎಕರೆ ಜಮೀನನ್ನು ದಲಿತ ಕುಟುಂಬಗಳಿಗೆ ತಲಾ ಐದು ಎಕರೆಯಂತೆ ನೀಡಬೇಕು. ದಲಿತ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಮುದ್ರದಲ್ಲಿ ಮುಳುಗಿಸಿ: ರಾಜ್ಯದ ಮುಜರಾಯಿ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಅವರು ಮಳೆಗಾಗಿ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಇಂಥ ಮೂಢನಂಬಿಕೆಗಳು ಹೋಗಬೇಕು. ಸಚಿವ ಪೂಜಾರಿ ಅವರನ್ನು ಸಮುದ್ರದಲ್ಲಿ ಮುಳುಗಿಸಿದರೆ ರಾಜ್ಯವಷ್ಟೇ ಅಲ್ಲ, ಇಡೀ ದೇಶದ ತುಂಬ ಸಮೃದ್ಧ ಮಳೆ ಆಗುತ್ತದೆ ಎಂದು ಹೇಳಿದರು.

ಈ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಯಾವುದೇ ಕಾರಣಕ್ಕೂ ಬೆಂಗಳೂರಿನ ವಿಧಾನಸೌಧದ ಎದುರಿಗಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸಬಾರದು. ಅಗತ್ಯವೆನಿಸಿದರೆ ಮೆಟ್ರೋ ರೈಲು ಮಾರ್ಗವನ್ನು ಬದಲಾಯಿಸಬೇಕು ಎಂದರು.ಶ್ರೀಕಾಂತ ತಳಕೇರಿ, ಶ್ರವಣ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.