ADVERTISEMENT

ಸರ್ಕಾರಿ ಯೋಜನೆ ಜನರಿಗೆ ತಲುಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 10:15 IST
Last Updated 22 ಜನವರಿ 2011, 10:15 IST

ಬೈಲಹೊಂಗಲ: ರಾಜಕೀಯ ವ್ಯಕ್ತಿಗಳ ಮಾತಿಗೆ ಕಿವಿಗೊಡದೇ, ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡುವಂತೆ ಮಾನವ ಹಕ್ಕುಗಳ ಆಯೋಗದ ರಾಜ್ಯ ಅಧ್ಯಕ್ಷ ಎಸ್.ಆರ್.ನಾಯಕ ಅಧಿಕಾರಿಗಳಿಗೆ ಸಲಹೆ ಮಾಡಿದರು.

ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಾನವ ಹಕ್ಕುಗಳ ಅರಿವು-ರಕ್ಷಣೆ, ನೆರವು ಕುರಿತ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಸ್ವಾತಂತ್ರ್ಯ ಸಿಕ್ಕು ಆರು ದಶಕಗಳು ಕಳೆದರೂ ಜನರಿಗೆ ವಸತಿ, ವಿದ್ಯುತ್ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿ ಸಿಗದೇ ಇರುವುದಕ್ಕೆ ವಿಷಾದಕರ ವ್ಯಕ್ತಪಡಿಸಿದರು.

ಪೌಷ್ಟಿಕ ಆಹಾರದ ಕೊರತೆಯಿಂದ ಜಗತ್ತಿನಲ್ಲಿ ಸುಮಾರು 50 ಕೋಟಿ ಮಕ್ಕಳು ಸಾವನ್ನಪ್ಪುತಿರುವುದರ ಕುರಿತು ಕಳವಳ ವ್ಯಕ್ತಪಡಿದರು. ರೈತರು ರಾಸಾಯನಿಕ ಗೊಬ್ಬರಗಳ ಬಳಕೆಗೆ ಕಡಿವಾಣ ಹಾಕಿ, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಮಹಿಳೆಯರ ಕುರಿತು ತಾತ್ಸಾರ ಮನೋಭಾವನೆ ಬೇಡ ಎಂದ ಅವರು ಪುರುಷರ ದೌರ್ಜನ್ಯದಿಂದ ಮಹಿಳೆ ಯರು ಹೊರಬಂದು ಸಮಾನತೆ ಯಿಂದ ಸ್ವಾವಲಂಬನೆ ಜೀವನ ನಡೆಸುವ ವಾತಾವರಣ ನಿರ್ಮಾಣ ಆಗಬೇಕು ಎಂದರು.ಜಾತಿರಹಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.

ಜನರ ಹಕ್ಕುಗಳ ರಕ್ಷಣೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಅಧಿಕಾರಿಗಳು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಪ್ರಜ್ಞಾವಂತ ನಾಗರಿಕರು ಜಾಗೃತರಾಗಿ ಈ ವ್ಯವಸ್ಥೆಯ ನಿರ್ಮೂಲನೆಗೆ ಮುಂದಾಗಬೇಕು ಎಂದರು.

ಮತದಾರರು ಹಣ, ಹೆಂಡಗಳಿಗೆ ಮಾರುಹೋಗದೇ, ಮುಕ್ತ ವಾತಾವರಣದಲ್ಲಿ ಮತ ಚಲಾಯಿ ಸಿದರೆ ಮಾತ್ರ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಅನುಕೂಲ ಆಗುತ್ತದೆ. ಇಲ್ಲದಿದ್ದರೆ ರಾಜಕಾರಣಿಗಳು ಹೇಳಿದಂತೆ ತಲೆ ಆಡಿಸಬೇಕಾಗುತ್ತದೆ ಎಂದರು. ಪಟ್ಟಣ ಹಾಗೂ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳ ಪರಿಸ್ಥಿತಿ ನೋಡಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಅವರು ಗರ್ಭಿಣಿಯರ ಹಾಗೂ ತುರ್ತು ಚಿಕಿತ್ಸೆಯ ರೋಗಿಗಳ ಗತಿಯೇನು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಮಾನವ ಹಕ್ಕುಗಳ ಆಯೋಗಕ್ಕೆ ಅಹವಾಲುಗಳನ್ನು ಸಲ್ಲಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಶೌಚಾಲಯ ಹಾಗೂ ವಾರ್ಡಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಗಮನಿಸಿ ಮುಖ್ಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು. ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಯನ್ನು ಪರಿಶೀಲಿಸಿದರು.

ಉಪ ವಿಭಾಗಾಧಿಕಾರಿ ವಿ.ಬಿ. ದಾಮಣ್ಣವರ, ಡಿವೈಎಸ್‌ಪಿ ಎಸ್.ಬಿ. ಪಾಟೀಲ, ತಹಸೀಲ್ದಾರ ಪಿ.ಎನ್. ಲೋಕೇಶ, ತಾ.ಪಂ. ಇ.ಒ. ಪಿ.ಎಸ್. ಕೊಣ್ಣೂರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಿ. ಶಾಲಗಾರ, ಕಿತ್ತೂರ ತಹಸೀಲ್ದಾರ ಎಸ್.ಎಸ್. ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿನೋದ ನಾಯಕ, ಸಮಾಜ ಕಲ್ಯಾಣಾಧಿಕಾರಿ ಬಿ.ಡಿ. ಚಿನಗುಂಡಿ ಹಾಗೂ ತಾಲ್ಲೂಕು  ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.