ADVERTISEMENT

`ಸಿಲ್ಕ್' ಚಿತ್ರ ಪ್ರದರ್ಶನಕ್ಕೆ ವಿರೋಧ ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 6:56 IST
Last Updated 3 ಆಗಸ್ಟ್ 2013, 6:56 IST

ಬೆಳಗಾವಿ: ಕನ್ನಡ ಚಲನಚಿತ್ರ `ಸಿಲ್ಕ್'ದಲ್ಲಿ ಪಾಕಿಸ್ತಾನ ಮೂಲದ ನಟಿ ನಟಿಸಿದ್ದನ್ನು ವಿರೋಧಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಇಲ್ಲಿನ ಸಂತೋಷ-ನಿರ್ಮಲ ಚಿತ್ರಮಂದಿರದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಲನಚಿತ್ರದ ಪೋಸ್ಟರ್‌ಗಳನ್ನು ಹರಿಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಪಾಕಿಸ್ತಾನ ಮೂಲದ ನಟಿ ನಟಿಸಿದ್ದಕ್ಕೆ ಚಿತ್ರ ಪ್ರದರ್ಶನ ಬಂದ್ ಮಾಡಬೇಕು ಎಂದು ಪ್ರತಿಭಟನಾಕಾರರು ಚಿತ್ರಮಂದಿರಕ್ಕೆ ತೆರಳಿ ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಚಿತ್ರಮಂದಿರದಲ್ಲಿ ಪೋಸ್ಟರ್‌ಗಳನ್ನು ಹರಿದು ಹಾಕಲು ಪ್ರತಿಭಟನಾಕಾರರು ಮುಂದಾಗುತ್ತಿದ್ದಂತೆ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

`ದೇಶದ ಸುರಕ್ಷತೆ ಹಾಗೂ ಸ್ವಾಭಿಮಾನದ ದೃಷ್ಟಿಯಿಂದ ಪಾಕಿಸ್ತಾನ ಮೂಲದ ನಟಿ ನಟಿಸಿರುವ ಚಿತ್ರ ಸಿಲ್ಕ್ ಪ್ರದರ್ಶನ ವಿರೋಧಿಸುತ್ತೇವೆ. ಪಾಕಿಸ್ತಾನ ಎಲ್ಲಿಯವರೆಗೆ ಭಯೋತ್ಪಾದನೆ ನಿಲ್ಲಿಸುವುದಿಲ್ಲವೋ, ಆ ದೇಶದವರು ನಟಿಸಿರುವ ಯಾವುದೇ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಸಿಲ್ಕ್ ಚಿತ್ರವನ್ನು ಬಹಿಷ್ಕರಿಸಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸಿದ ನಂತರ ಚಲನಚಿತ್ರ ಪ್ರದರ್ಶನ ಮುಂದುವರಿಯಿತು. ಶ್ರೀರಾಮ ಸೇನಾದ 45 ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.