ADVERTISEMENT

ಸುವರ್ಣ ವಿಧಾನಸೌಧದಲ್ಲಿ ಪ್ರಥಮ ಕಾರ್ಯಕಲಾಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:20 IST
Last Updated 13 ಅಕ್ಟೋಬರ್ 2012, 9:20 IST

ಬೆಳಗಾವಿ: ಗುರುವಾರವಷ್ಟೇ  ಲೋಕಾರ್ಪಣೆಗೊಂಡ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ವಿಧಾನ ಮಂಡಲದ ಅಂದಾಜು ಸಮಿತಿ ಸಭೆ ನಡೆಯುವುದರ ಮೂಲಕ ಹೊಸ ಕಟ್ಟಡದಲ್ಲಿ  ವಿಧಾನ ಮಂಡಲದ ಕಾರ್ಯಕಲಾಪ ಪ್ರಾರಂಭವಾಯಿತು.

ವಿಧಾನ ಮಂಡಲದ ಅಂದಾಜು ಸಮಿತಿ ಅಧ್ಯಕ್ಷ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಂದಾಜು ಸಮಿತಿ ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ನೀರಾವರಿ ಇಲಾಖೆಗಳ ಅನುದಾನದ ವೆಚ್ಚದ ಕುರಿತು ಚರ್ಚೆ ನಡೆಯಿತು.

ಸಮಿತಿ ಸದಸ್ಯರಾದ ಪ್ರಕಾಶ ಹುಕ್ಕೇರಿ, ಬಂಡೆಪ್ಪ ಕಾಶಂಪುರ, ಡೆರಿಕ್ ಫುಲ್ಲಿನ್‌ಫಾ, ವೀರಣ್ಣ ಚರಂತಿಮಠ, ಲಕ್ಷ್ಮೀನಾರಾಯಣ, ಸುರೇಶಗೌಡ ಪಾಟೀಲ, ವಿ.ಎಸ್. ಪಾಟೀಲ, ಕರಡಿ ಸಂಗಣ್ಣ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ ಪಾಟೀಲ, `ವಿವಿಧ ಇಲಾಖೆಗಳಿಗೆ ಸರ್ಕಾರ ನೀಡಿರುವ ಅನುದಾನದ ಖರ್ಚು-ವೆಚ್ಚಗಳ ಬಗ್ಗೆ ಚರ್ಚೆ ನಡೆಯಲಿದೆ.  ವಿವಿಧ ಯೋಜನೆಗಳಲ್ಲಿ ಅನುದಾನ ಸದ್ಬಳಕೆಯಾದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು~ ಎಂದರು.

ಪ್ರವಾಸಿ ತಾಣವಾಗಿ ಬೆಳಗಾವಿ:
ಬೆಳಗಾವಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಕುರಿತು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಅವರೊಂದಿಗೆ ಚರ್ಚಿಸಿದ್ದು, ಅವರೂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.

ಗೋವಾದಿಂದ ಬರುವ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಮೂಲಕ ಐಹೊಳೆ, ಪಟ್ಟದಕಲ್ಲು ವೀಕ್ಷಣೆಗೆ ಬಸ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಬೆಳಗಾವಿಯಲ್ಲಿ ವ್ಯಾಪಾರ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಅಭಯ್ ಪಾಟೀಲ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.