ADVERTISEMENT

ಹಳಿ ತಪ್ಪಿ ದ ರೈಲಿಗೆ ನೌಕರ ಬಲಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬೆಳಗಾವಿ: ತಾಲ್ಲೂಕಿನ ಕರಿಕಟ್ಟಿ ಕ್ರಾಸ್‌ಬಳಿ ಸೋಮವಾರ ಸಂಜೆ ನಡೆದ ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲು ಅಪಘಾತದಲ್ಲಿ ಗ್ಯಾಂಗ್‌ಮನ್ ಒಬ್ಬರು ಮೃತಪಟ್ಟಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಸುಮಾರು 40 ಪ್ರಯಾಣಿಕರು ಚೇತರಿಸಿಕೊಳ್ಳುತ್ತಿದ್ದಾರೆ.

ಗೋಕಾಕ ತಾಲ್ಲೂಕಿನ ಬೂದಿಹಾಳ ಗ್ರಾಮದ ಹೇಮಂತ ಪರಶುರಾಮ ಕುಪ್ಪಣ್ಣವರ (35) ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

`ಭಾರಿ ಪ್ರಮಾಣದ ಮಳೆ ನೀರು ನುಗ್ಗಿದ್ದರಿಂದ ಶಿಥಿಲಗೊಂಡಿದ್ದ ರೈಲ್ವೆ ಹಳಿ ಮೇಲೆ ಸೋಮವಾರ ಸಂಜೆ ಹುಬ್ಬಳ್ಳಿ- ಮಿರಜ್ ರೈಲು ಆಗಮಿಸುತ್ತಿದ್ದಂತೆಯೇ ಎಂಜಿನ್ ಪಲ್ಟಿಯಾಗಿ ನಾಲ್ಕು ಬೋಗಿಗಳು ಹಳಿ ತಪ್ಪಿ ಪಕ್ಕಕ್ಕೆ ಸರಿದಿದ್ದವು. ಈ ಸಂದರ್ಭದಲ್ಲಿ ಎಂಜಿನ್ ಹಿಂದಿನ ಬೋಗಿಯ ಬಾಗಿಲ ಬಳಿ ಕುಳಿತಿದ್ದ ಗ್ಯಾಂಗ್‌ಮನ್ ಹೇಮಂತ ಹೊರಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿರಬೇಕು. ಹಳಿಯ ಪಕ್ಕದಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಮುಳುಗಿ ಸಮೀಪದ ಮೋರಿಯಲ್ಲಿ ಆತ ಸಿಲುಕಿಕೊಂಡಿದ್ದ. ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗ ಮಂಗಳವಾರ ಬೆಳಗಿನ ಜಾವ ಸುಮಾರು 2.30 ಗಂಟೆಗೆ ಆತನ ಶವ ದೊರೆಯಿತು~ ಎಂದು ಅಪಘಾತಕ್ಕೀಡಾದ ಹುಬ್ಬಳ್ಳಿ-ಮಿರಜ್ ರೈಲಿನ ಗಾರ್ಡ್ ಶೇಖ್ ಸಲೀಮ್ `ಪ್ರಜಾವಾಣಿ~ಗೆ ತಿಳಿಸಿದರು.

ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿದ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಅವರು, `ಮೃತಪಟ್ಟ ಗ್ಯಾಂಗ್‌ಮನ್ ಹೇಮಂತನ ಕುಟುಂಬಕ್ಕೆ ಇಲಾಖೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಆತನ ಕುಟುಂಬದ ಸದಸ್ಯರೊಬ್ಬರಿಗೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು~ ಎಂದು ಘೋಷಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, `ಮೃತ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಗಾಯಗೊಂಡರಿಗೆ ಅಗತ್ಯ ಚಿಕಿತ್ಸೆಯನ್ನು ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ನೀಡಲಾಗುವುದು~ ಎಂದು ತಿಳಿಸಿದರು.

ಸಂಸದ ಸುರೇಶ ಅಂಗಡಿ, ಶಾಸಕ ಫಿರೋಜ್ ಸೇಠ್, ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಮಹೇಂದ್ರ ಸಿಂಘಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ಡಿಆರ್‌ಎಂ ರಾಹುಲ್ ಜೈನ್, ರೈಲ್ವೆ ಮುಖ್ಯ ವಾಣಿಜ್ಯ ವ್ಯವಸ್ಥಾಪಕ  ಸಂಜೀಬ್ ಹಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಸಂಚಾರ ಆರಂಭ
ಸೋಮವಾರ ರಾತ್ರಿಯಿಂದಲೇ ರೈಲು ಹಳಿಯನ್ನು ಮರು ಜೋಡಿಸುವ ಕಾರ್ಯವನ್ನು ಇಲಾಖೆಯ ನೂರಾರು ಸಿಬ್ಬಂದಿ ಸಮರೋಪಾದಿಯಲ್ಲಿ ಕೈಗೊಂಡ ಪರಿಣಾಮ ಮಧ್ಯಾಹ್ನ 12 ಗಂಟೆಗೆ ಹಳಿಯನ್ನು ಸರಿಪಡಿಸಲಾಯಿತು.

ಎಂಜಿನ್ ಓಡಿಸಿ ಪರೀಕ್ಷಿಸಿದ ಬಳಿಕ ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ರೈಲು ಸಂಚಾರ ಆರಂಭಗೊಂಡಿತು. ಜೋಧಪುರ ಎಕ್ಸ್‌ಪ್ರೆಸ್, ಮಂಗಳವಾರ ಚಾಲನೆ ನೀಡಿದ ಮಿರಜ್-ಯಶವಂತಪುರ ವಿಶೇಷ ರೈಲು ಹಾಗೂ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT