ADVERTISEMENT

‘ಭೀಮಾಲಾಪ’ದಿಂದ ಮಂತ್ರಮುಗ್ಧರನ್ನಾಗಿಸಿದ ಜಿಎಸ್‌ಎಸ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 9:43 IST
Last Updated 24 ಡಿಸೆಂಬರ್ 2013, 9:43 IST

ಬೆಳಗಾವಿ: ‘ನನ್ನ ಎಲ್ಲ ಕವನಗಳಲ್ಲಿ ನನಗೆ ಇಷ್ಟವಾದ ಪದ್ಯ ಭೀಮಾಲಾಪ’ ಎಂದು ಹೇಳಿ ವಾಚಿಸುವ ಮೂಲಕ ಕನ್ನಡ ಮನಸ್ಸುಗಳೊಂದಿಗೆ ಮರಾಠಿ­ಗರನ್ನು ಮಂತ್ರಮುಗ್ಧರನ್ನಾಗಿಸಿದ ‘ಎದೆ ತುಂಬಿ ಹಾಡಿದ’ ರಾಷ್ಟ್ರಕವಿ ಡಾ. ಜಿ.ಎಸ್‌.ಶಿವರುದ್ರಪ್ಪ ಇನ್ನು ಬರೀ ನೆನಪು ಮಾತ್ರ. ಆದರೆ, ಅವರ ಈ ಮಾತು ಹಾಗೂ ಅವರ ಕಾವ್ಯ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸದಾ ಹರಿದಾಡುತ್ತಿದೆ.

ಕನ್ನಡದ ಮೂರನೇ ರಾಷ್ಟ್ರಕವಿ ಗೌರವ ಪಡೆದ ಜಿಎಸ್ಎಸ್‌ ಅವರಿಗೆ 2007ರ ಮಾರ್ಚ್ 26 ರಂದು ಕಾಲೇಜಿನ ಸೆಂಟ್ರಲ್‌ ಹಾಲ್‌ನಲ್ಲಿ ಅಭಿನಂದನ ಸಮಾರಂಭ ಏರ್ಪಡಿಸಲಾ­ಗಿತ್ತು. ಅಂದಿನ ಸಮಾರಂಭದಲ್ಲಿ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಆಡಳಿತ ಮಂಡಳಿ ಸದಸ್ಯರೆಲ್ಲರೂ ಭಾಗವಹಿಸಿ, ಶಿವರುದ್ರಪ್ಪ ಅವರಿಗೆ ಪೇಟಾವನ್ನು ತೊಡಿಸಿ ಸನ್ಮಾನಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಭಾಷಾ ಧ್ವೇಷವನ್ನು ಬದಿಗಿಟ್ಟು ಮರಾಠಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದರು. ಭಾಷೆಗೆ ಯಾವುದೇ ಗೋಡೆ ಇರಬಾರದು ಎಂಬುದಕ್ಕೆ ಜಿಎಸ್‌ಎಸ್‌ ಅವರ ಅಭಿನಂದನ ಸಮಾರಂಭ ಸಾಕ್ಷಿಯಾಗಿತ್ತು.

‘ಅಂದಿನ ಸಮಾರಂಭದಲ್ಲಿ ಸಂಶೋ­ಧನೆ ಹಾಗೂ ಸಾಹಿತ್ಯ ಲೋಕದ ದಿಗ್ಗಜರಾದ ಡಾ. ಎಂ.ಎಂ.ಕಲಬುರ್ಗಿ ಮತ್ತು ಡಾ. ಚೆನ್ನವೀರ ಕಣವಿ ಅವರು ಶಿವರುದ್ರಪ್ಪ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದರು. ಇವರಿಬ್ಬರ ಮಾತುಗಳನ್ನಾಲಿಸಿದ ಜಿಎಸ್‌ಎಸ್‌ ಅವರು, ಭಾವೋದ್ವೇಗಕ್ಕೊಳಗಾಗಿ, ಭೀಮಾಲಾಪ ಕಾವ್ಯ ಓದಿದರು. ಬೆಳಗಾವಿಯಲ್ಲಿ ಕರೆದು ಸತ್ಕಾರ ಮಾಡಿ­ದ್ದನ್ನು ಎಂದಿಗೂ ಮರೆಯಲಾಗುವು­ದಿಲ್ಲ ಎಂದು ಈ ಭಾಗದ ಗಡಿ ಜನರಿಗೆ ಕೃತಜ್ಞತೆ ಸಲ್ಲಿಸಿದ್ದರು’ ಎಂದು ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕ ಮಹೇಶ ನೆನಪಿಸಿಕೊಳ್ಳುತ್ತಾರೆ.

‘ಅಂದಿನ ಸಮಾರಂಭ ನಭೂತೋ ನಭವಿಷ್ಯತಿ ಎಂಬಂತೆ ನಡೆಯಿತು. ಕನ್ನಡ ಸಾರಸ್ವತ ಲೋಕದ ದಿಗ್ಗಜರ ಮಲ್ಲಿ­ಗೆಯ ಮಾತುಗಳು ಸಭಾಗೃಹದಲ್ಲಿ ಪರಿಮಳ ಬೀರಿದ್ದವು. ಡಾ. ಪ್ರಭಾಕರ ಕೋರೆ ಅವರ ಸಾರಥ್ಯದಲ್ಲಿ ಹಾಗೂ ಬೆಳಗಾವಿಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶಿವರುದ್ರಪ್ಪನವರ ನಾಗರಿಕ ಪೌರಸನ್ಮಾನದ ಮಧುರ ಕ್ಷಣ ಅದಾಗಿತ್ತು’ ಎಂದು ಕಾಲೇಜಿನ ಅಂದಿನ ಪ್ರಾಚಾರ್ಯರಾಗಿದ್ದ ಡಾ. ಬಸವರಾಜ ಜಗಜಂಪಿ ಸ್ಮರಿಸಿಕೊಂಡರು.

‘25 ವರ್ಷಗಳ ಹಿಂದೆ ನಡೆದ ಎಸ್‌.ಡಿ. ಇಂಚಲ ಅವರ ಸ್ಮಾರಕ ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರುದ್ರಪ್ಪನವರು ಅಭೂತಪೂರ್ವ ಉಪನ್ಯಾಸ ನೀಡಿದ್ದರು. ವಿಶ್ವಕನ್ನಡ ಸಮ್ಮೇಳನದಲ್ಲೂ ಭಾಗವಹಿಸಿದ್ದರು. ಕುವೆಂಪು ಅವರ ನಂತರ ಅಖಂಡ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿ ನಿಂತ­ವರು ಅವರು. ಇವರೊಬ್ಬ ಅಪರೂ­ಪದ ವ್ಯಕ್ತಿಯಷ್ಟೇ ಅಲ್ಲ, ಅಪರೂಪದ ವ್ಯಕ್ತಿಗಳಲ್ಲೇ ಮುಖ್ಯರಾದವರು’ ಎಂದು ಬೆಳಗಾವಿಯ ಅನೇಕ ಕನ್ನಡ ಅಭಿಮಾನಿಗಳು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.