ADVERTISEMENT

‘ಲಿಂಗಾಯತ ಧರ್ಮದಲ್ಲಿ ತಾರತಮ್ಯವಿಲ್ಲ: ಮರಾಠೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:22 IST
Last Updated 5 ಡಿಸೆಂಬರ್ 2021, 14:22 IST
ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ನಡೆದ ಮಾಸಿಕ ಅನುಭಾವ ಸತ್ಸಂಗದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಶಂಕರ ಗುಡಸ್, ರಾಮಕೃಷ್ಣ ಮರಾಠೆ, ಬಸವರಾಜ ರೊಟ್ಟಿ ಮೊದಲಾದವರು ಇದ್ದಾರೆ
ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ನಡೆದ ಮಾಸಿಕ ಅನುಭಾವ ಸತ್ಸಂಗದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಶಂಕರ ಗುಡಸ್, ರಾಮಕೃಷ್ಣ ಮರಾಠೆ, ಬಸವರಾಜ ರೊಟ್ಟಿ ಮೊದಲಾದವರು ಇದ್ದಾರೆ   

ಬೆಳಗಾವಿ: ‘ಯಾವುದೇ ತಾರತಮ್ಯವಿಲ್ಲದ ಧರ್ಮವಿದ್ದರೆ ಅದು ಲಿಂಗಾಯತ ಧರ್ಮ’ ಎಂದು ಸಾಹಿತಿ ರಾಮಕೃಷ್ಣ ಮರಾಠೆ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಾಸಿಕ ಅನುಭಾವ ಸತ್ಸಂಗದಲ್ಲಿ ಅವರು ಮಾತನಾಡಿದರು.

‘ದೇಹವೇ ದೇವಾಲಯ ಎಂದು ತಿಳಿಸಿದ ಹಾಗೂ ದೇವರನ್ನು ಸಾಮಾಜಿಕಗೊಳಿಸಿದವರು ಬಸವಣ್ಣನವರು. ವಿಶ್ವದ ಪ್ರತಿಯೊಬ್ಬರೂ ಇಷ್ಟಲಿಂಗವನ್ನು ಪೂಜಿಸಿ ಈ ಕಾಯವನ್ನು ಕೈಲಾಸ ಮಾಡಿಕೊಳ್ಳುವ ವಿಧಾನವನ್ನು ನಮಗೆ ಶರಣರು ತಿಳಿಸಿಕೊಟ್ಟಿದ್ದಾರೆ’ ಎಂದರು.

ADVERTISEMENT

‘ಕೆಲವು ಪಟ್ಟಭದ್ರ ಹಿತಾಸಕ್ತಿಯ ಜನರು ವಿವಿಧ ತಾರತಮ್ಯಗಳನ್ನು ಮಾಡಿ ಜನರಿಗೆ ದೇವಾಲಯಗಳಿಗೆ ಪ್ರವೇಶ ನಿರ್ಬಂಧಿಸಿದ್ದರು. ಶೋಷಣೆಗೆ ಒಳಗಾಗಿಸಿದ್ದರು. ಆಗ, ಬಸವಣ್ಣನವರು ಇಷ್ಟಲಿಂಗವನ್ನು ನೀಡಿದರು. ಅದನ್ನು ಪೂಜಿಸಿ ನಾವು ಆತ್ಮೋದ್ಧಾರ ಮಾಡಿಕೊಳ್ಳುವ ಮೂಲಕ ದೈವತ್ವ ಪಡೆಯಲು ಸಾಧ್ಯ ಎನ್ನುವುದನ್ನು ಬಸವಾದಿ ಶರಣರು ತೋರಿಸಿಕೊಟ್ಟರು’ ಎಂದರು.

‘ಈಗ ಪಾಶ್ಚಿಮಾತ್ಯರೂ ಇಷ್ಟಲಿಂಗದ ಮಹತ್ವವನ್ನು ಅರಿಯುತ್ತಿದ್ದಾರೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಆಚರಣೆಗೆ ತರಬೇಕು. ನಮ್ಮ ಯುವಪೀಳಿಗೆಗೆ ಲಿಂಗಾಯತ ಧರ್ಮದ ಸಂಸ್ಕಾರ ಕೊಡುವುದರಲ್ಲಿ ತಪ್ಪುತ್ತಿದ್ದೇವೆ. ಇಂತಹ ಸಮಾರಂಭಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಮೂಲಕ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ‘ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಸಂಘಟಿತರಾಗಿ ಹೋರಾಡಬೇಕು. ಕೊರೊನಾದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೋರಾಟವನ್ನು ಮುಂದುವರಿಸಲಾಗುವುದು. ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಶಂಕರ ಗುಡಸ, ಈರಣ್ಣ ಚಿನಗುಡಿ, ಪಾರ್ವತೆವ್ವ ಚಿನಗುಡಿ ಇದ್ದರು.

ಅಶೋಕ ಮಳಗಲಿ ಸ್ವಾಗತಿಸಿದರು. ಅಡಿವೆಪ್ಪ ಇಟಗಿ ನಿರೂಪಿಸಿದರು. ಎಸ್.ಜಿ. ಸಿದ್ನಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.