ADVERTISEMENT

ಕಳೆದ ವರ್ಷದ ಬೆಳಗಾವಿ ಅಧಿವೇಶನಕ್ಕೆ ₹ 13.85 ಕೋಟಿ ವೆಚ್ಚ

ಮಾಹಿತಿ ಹಕ್ಕಿನಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 11:01 IST
Last Updated 10 ಅಕ್ಟೋಬರ್ 2019, 11:01 IST
ಬೆಳಗಾವಿಯ ಸುವರ್ಣ ವಿಧಾನಸೌಧ
ಬೆಳಗಾವಿಯ ಸುವರ್ಣ ವಿಧಾನಸೌಧ   

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನಕ್ಕಾಗಿ ₹ 13.85 ಕೋಟಿ ಖರ್ಚಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಹಣ ಖರ್ಚಾಗಿದ್ದರೂ ಜನರು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿರಲಿಲ್ಲ. ಎಲ್ಲವೂ ವ್ಯರ್ಥವಾಗಿ ಹೋಯಿತು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಜಿ. ಗಡಾದ ಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದಿರುವ ಅವರು, ಅಧಿವೇಶನದಲ್ಲಿ ಖರ್ಚಾಗಿರುವ ಲೆಕ್ಕವನ್ನು ನೀಡಿದ್ದಾರೆ.

‘10 ದಿನಗಳಲ್ಲಿ ವಿಧಾನಸಭೆ ಕಲಾಪ ನಡೆದಿದ್ದು ಕೇವಲ 40 ಗಂಟೆ 25 ನಿಮಿಷ. ಅದರಂತೆ ವಿಧಾನ ಪರಿಷತ್‌ ಕಲಾಪ ನಡೆದಿದ್ದು ಕೇವಲ 47 ಗಂಟೆ 3 ನಿಮಿಷ. ಅಧಿವೇಶನದ ಅವಧಿ ಹಾಗೂ ಮಾಡಲಾದ ಖರ್ಚನ್ನು ತಾಳೆ ಹಾಕಿ ನೋಡಿದರೆ, ಪ್ರತಿ ತಾಸಿಗೆ ₹ 3.37 ಲಕ್ಷ ಖರ್ಚಾಗಿದೆ’ ಎಂದು ವಿವರಿಸಿದರು.

ADVERTISEMENT

‘ಅಧಿವೇಶನದ ಕಲಾಪದಲ್ಲಿ ರೈತರ ಸಮಸ್ಯೆಗಳು ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯಲಿಲ್ಲ. ಪರಿಹಾರವೂ ಹೊರಹೊಮ್ಮಲಿಲ್ಲ. ಆದರೆ, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಸೇರಿ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾದ ₹13,85,38,155 ಖರ್ಚು ಮಾಡುವಲ್ಲಿ ಸಫಲರಾಗಿದ್ದಾರೆ. ಈ ಅಧಿವೇಶನವು ತೆರಿಗೆ ಹಣ ನುಂಗುವ ಅಧಿವೇಶನ ಎಂದರೆ ತಪ್ಪಾಗಲಿಕ್ಕಿಲ್ಲ’ ಎಂದರು.

‘ಜಿಲ್ಲಾಡಳಿತದಿಂದ ₹ 11.23 ಕೋಟಿ, ಶಾಸಕರು– ಅಧಿಕಾರಿಗಳು– ಸಿಬ್ಬಂದಿಗಳ ಪ್ರಯಾಣ ಭತ್ಯೆಗಾಗಿ ಸಚಿವಾಲಯವು ₹ 2,61 ಕೋಟಿ ನೀಡಿದೆ’ ಎಂದು ಹೇಳಿದರು.

ಖರೀದಿಸಿದ ಕಂಪ್ಯೂಟರ್‌ ಏಲ್ಲಿ?

‘ಕಂಪ್ಯೂಟರ್‌, ಅಂತರ್ಜಾಲ, ಝೆರಾಕ್ಸ್‌ ಮಷಿನ್‌ ಹಾಗೂ ಐ.ಟಿ ಕಾಮಗಾರಿಗಳ ಸಲುವಾಗಿ ₹ 68.94 ಲಕ್ಷ ವೆಚ್ಚ ಮಾಡಲಾಗಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಅಧಿವೇಶನ ನಡೆಸುವಾಗ ಕಂಪ್ಯೂಟರ್‌, ಝೆರಾಕ್ಸ್‌ ಮಷಿನ್‌ಗಳನ್ನು ಖರೀದಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅಧಿವೇಶನ ಮುಗಿದ ನಂತರ ಅವು ಏನಾಗುತ್ತವೆ ? ಹಿಂದಿನ ವರ್ಷದ ಮಷಿನ್‌ಗಳನ್ನೇ ಏಕೆ ಬಳಸುವುದಿಲ್ಲ? ಪ್ರತಿ ಸಲ ಹೊಸ ಮಷಿನ್‌ಗಳೇ ಏಕೆ ಬೇಕು?’ ಎಂದು ಪ್ರಶ್ನಿಸಿದರು.

ರಾಜಕಾರಣಿಗಳ ಪ್ರಭಾವವೇ?

‘ಊಟದ ಸಲುವಾಗಿ, ಪೆಂಡಾಲ ನಿರ್ಮಿಸಲು ₹ 2.33 ಕೋಟಿ ವೆಚ್ಚ ಮಾಡಲಾಗಿದೆ. ಇಷ್ಟೊಂದು ಹಣ ಪಾವತಿ ಮಾಡಿದ್ದಾರೆಂದರೆ ಅಂತಹ ಗುತ್ತಿಗೆದಾರರಿಗೆ ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷ ಇರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

ಹೆದರಿದ ಸರ್ಕಾರ

‘ನೆರೆ ಪರಿಹಾರ ಕಾಮಗಾರಿ ಸಮರ್ಥವಾಗಿ ಕೈಗೊಂಡಿಲ್ಲ. ಅದಕ್ಕೆ ರೈತರು ಹಾಗೂ ಸಾರ್ವಜನಿಕರಲ್ಲಿ ಸಿಟ್ಟು ಮಡುಗಟ್ಟಿದೆ. ಯಾವಾಗ ಸ್ಫೋಟವಾಗುತ್ತದೆಯೋ? ಯಾವಾಗ ನಮ್ಮನ್ನು ಘೇರಾವ್‌ ಹಾಕುತ್ತಾರೆಯೋ ಎನ್ನುವ ಹೆದರಿಕೆಯಿಂದಲೇ ಈ ಸಲ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿಲ್ಲ’ ಎಂದು ಕಿಚಾಯಿಸಿದರು.

‘ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಯಾವೊಬ್ಬ ಶಾಸಕರೂ ಇಲ್ಲಿಯೇ ಅಧಿವೇಶನ ನಡೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರದಿರುವುದು ದುರದೃಷ್ಟಕರ. ಇಲ್ಲಿ ನಡೆಯುವುದು ಅವರಿಗೇ ಬೇಡವಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.