ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ, ಶಮನೇವಾಡಿ ಮತ್ತು ಕಾರದಗಾ ಗ್ರಾಮಗಳ ವ್ಯಾಪ್ತಿಯಲ್ಲಿ ದೂಧಗಂಗಾ ನದಿಯಿಂದ ಅಕ್ರಮವಾಗಿ ಮರಳು ಎತ್ತುವಳಿ ಮಾಡುತ್ತಿದ್ದ ಘಟಕಗಳ ಮೇಲೆ ಶುಕ್ರವಾರ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಒಟ್ಟು 10 ಯಾಂತ್ರಿಕ ದೋಣಿಗಳನ್ನು ಧ್ವಂಸಗೊಳಿಸಿದ್ದಾರೆ.
‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಅವ್ಯಾಹತವಾಗಿ ನಡೆದ ಮರಳು ಸಾಗಣೆ’ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ವಿವಿಧೆಡೆ ದೂಧಗಂಗಾ ನದಿಯಿಂದ ಮರಳು ಎತ್ತುವಳಿ ಮಾಡುತ್ತಿದ್ದ ದೋಣಿಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಿಂದ ಹಾಡುಹಗಲೇ ಯಾಂತ್ರಿಕ ದೋಣಿಗಳ ಮೂಲಕ ಮರಳು ಎತ್ತುವಳಿ ಮತ್ತು ಸಾಗಾಟ ಚಟುವಟಿಕೆ ರಾಜಾರೋಷವಾಗಿ ನಡೆದಿರುವ ಹಿನ್ನೆಲೆಯಲ್ಲಿ ಕೃಷ್ಣೆ ಮತ್ತು ಉಪನದಿಗಳು ಮಲೀನಗೊಂಡು ನದಿತೀರ ವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕುರಿತು ಪ್ರಜಾವಾಣಿ ಸವಿಸ್ತಾರ ವರದಿ ಪ್ರಕಟಿಸಿತ್ತು.
‘ತಾಲ್ಲೂಕಿನಲ್ಲಿ ದೂಧಗಂಗಾ ನದಿತೀರದಲ್ಲಿ ಅಕ್ರಮವಾಗಿ ಮರಳು ಎತ್ತುವಳಿ ಮಾಡುತ್ತಿದ್ದ ಘಟಕಗಳ ಮೇಲೆ ಸದಲಗಾದ ಉಪತಹಸೀಲ್ದಾರ ಸಿ.ಎ. ಪಾಟೀಲ, ಸಿಪಿಐ ಶಂಕರ ರಾಗಿ ಮತ್ತು ಸದಲಗಾ ಪಿಎಸ್‌ಐ ರಾಘವೇಂದ್ರ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮರಳು ಎತ್ತುವಳಿ ಮಾಡಲು ಬಳಸುವ 10 ಯಾಂತ್ರಿಕ ದೋಣಿಗಳನ್ನು ಧ್ವಂಸ ಮಾಡಲಾಗಿದೆ’ ಎಂದು ತಹಶಿೀಲ್ದಾರ್ ರಾಜಶೇಖರ ಡಂಬಳ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.