ADVERTISEMENT

13 ಶಾಸಕರಲ್ಲಿ ಇಬ್ಬರಿಗಷ್ಟೆ ಸ್ಥಾನ; ಬೆಳಗಾವಿಗೆ ಪ್ರಾತಿನಿಧ್ಯ ಕುಸಿತ

ಲಕ್ಷ್ಮಣ ಸವದಿ, ಜಾರಕಿಹೊಳಿ ಸಹೋದರರಿಗೆ ಹಿನ್ನಡೆ

ಎಂ.ಮಹೇಶ
Published 4 ಆಗಸ್ಟ್ 2021, 8:18 IST
Last Updated 4 ಆಗಸ್ಟ್ 2021, 8:18 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಪ್ರಸ್ತುತ 13 ಮಂದಿ ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವ ಭಾಗ್ಯ ಸಿಕ್ಕಿರುವುದು ಇಬ್ಬರಿಗೆ ಮಾತ್ರ.

ಹಿರಿಯ ಶಾಸಕ ಹುಕ್ಕೇರಿಯ ಉಮೇಶ ಕತ್ತಿ ಹಾಗೂ ನಿಪ್ಪಾಣಿ ಕ್ಷೇತ್ರದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶಶಿಕಲಾ ಜೊಲ್ಲೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಸ್ಥಾನಗಳೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಾಲಾಗಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಭಾಗದವರಿಗೆ ಅವಕಾಶ ದೊರೆತಿಲ್ಲ. ಅದರಲ್ಲೂ ವೀರಶೈವ ಲಿಂಗಾಯತ ಸಮಾಜದವರಿಗೆ ಪ್ರಾಧಾನ್ಯತೆ ದೊರೆತಿದೆ. ಇದು ಇಲ್ಲಿನ ಸಚಿವಾಕಾಂಕ್ಷಿಗಳಾಗಿದ್ದ ಇತರ ಶಾಸಕರು ಮತ್ತು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಭಾಗದ ಪ್ರಭಾವಿ ನಾಯಕರಾದ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಣ ಸವದಿ ಅವರಿಗೆ ತೀವ್ರ ಹಿನ್ನಡೆ ಜೊತೆಗೆ ಮುಖಭಂಗವೂ ಆಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಐವರಿಗೆ ಸ್ಥಾನ ಸಿಕ್ಕಿತ್ತು:

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ 5 ಸ್ಥಾನಗಳು ಬೆಳಗಾವಿಗೆ ಸಿಕ್ಕಿದ್ದವು. ಲಕ್ಷ್ಮಣ ಸವದಿ, ಉಮೇಶ ಕತ್ತಿ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಶಶಿಕಲಾ ಜೊಲ್ಲೆ ಸಚಿವರಾಗಿದ್ದರು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರಿಗೆ ಅವಕಾಶ ದೊರೆತಿತ್ತು. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದೊಂದಿಗೆ ಸಾರಿಗೆ ಖಾತೆ ನೀಡಲಾಗಿತ್ತು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರು. ಸಿ.ಡಿ. ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಜಿಲ್ಲೆಯ ನಾಲ್ವರು ಸಚಿವರಾಗಿ ಉಳಿದಿದ್ದರು. ಬೆಂಗಳೂರು ಹೊರತುಪಡಿಸಿದರೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲಿಗೆ ದೊರೆತಿತ್ತು. ಇದು, ಪ್ರಾತಿನಿಧ್ಯವೇ ಸಿಗದಿರುವ ಜಿಲ್ಲೆಗಳ ಬಿಜೆಪಿ ಶಾಸಕರ ಅಥವಾ ಸಚಿವ ಸ್ಥಾನದ ಆಕಾಂಕ್ಷಿಗಳ ಕೆಂಗಣ್ಣಿಗೂ ಗುರಿಯಾಗಿತ್ತು.

ಜಾರಕಿಹೊಳಿ ಸಹೋದರರ ಪೈಕಿ ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈ ಬಾರಿ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಅವರಿಗೆ ಅವಕಾಶ ಸಿಕ್ಕಿಲ್ಲ.

ಕುಟುಂಬ ರಾಜಕಾರಣಕ್ಕೆ ಮಣೆ:

ಜೊಲ್ಲೆ ದಂಪತಿ ಮೂಲ ಬಿಜೆಪಿಗರು. ಜೊತೆಗೆ ಸಂಘ ಪರಿವಾರ ಮತ್ತು ಪಕ್ಷದ ಹೈಕಮಾಂಡ್ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹಲವು ದಿನಗಳಿಂದ ದೆಹಲಿಯಲ್ಲೇ ಇದ್ದುಕೊಂಡು ಲಾಬಿ ನಡೆಸಿದ್ದರು. ಹೀಗಾಗಿ, ಶಶಿಕಲಾ ಜೊಲ್ಲೆ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ‘ಮೊಟ್ಟೆ ಖರೀದಿ ಹಗರಣ’ದ ಆರೋಪ ಕೇಳಿಬಂದಿದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಆ ಆರೋಪಗಳಿಗೆ ಹೈಕಮಾಂಡ್ ಮಣೆ ಹಾಕಿಲ್ಲದಿರುವುದು ಸ್ಪಷ್ಟವಾಗಿದೆ. ಜೊತೆಗೆ, ಕುಟುಂಬ ರಾಜಕಾರಣಕ್ಕೂ ಜೈ ಎಂದಿದೆ ಎನ್ನಲಾಗುತ್ತಿದೆ.

ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದ ಶ್ರೀಮಂತ ಪಾಟೀಲ ಖಾತೆ ನಿರ್ವಹಣೆಯಲ್ಲಿ ತಮ್ಮ ಕಳಪೆ ಸಾಧನೆಯಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್‌ಎಸ್‌ಎಸ್‌ ಜೊತೆಗೂ ನಂಟು ಹೊಂದಿರುವ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂಬ ಲೆಕ್ಕಾಚಾರವೂ ಹುಸಿಯಾಗಿದೆ.

ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ಪ್ರಕಟಿಸಿದ್ದಾರೆ. ರಾಯಬಾಗದ ದುರ್ಯೋಧನ ಐಹೊಳೆ ಕೂಡ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಹೈಕಮಾಂಡ್ ಪರಿಗಣಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.