ADVERTISEMENT

25ರೊಳಗೆ ಕ್ರಿಯಾಯೋಜನೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 6:25 IST
Last Updated 16 ಮಾರ್ಚ್ 2011, 6:25 IST

ರಾಯಬಾಗ: ‘ಪ್ರಸಕ್ತ ಸಾಲಿನ ತಾಲ್ಲೂಕು ಪಂಚಾಯಿತಿಯ ಕ್ರಿಯಾ ಯೋಜನೆಯನ್ನು ಮಾ.25ರ ಒಳಗಾಗಿ ಸಿದ್ಧ ಪಡಿಸಲಾಗುವುದು.  ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ನೀಡಬೇಕು’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ. ಪಾಟೀಲ ಕೋರಿದರು.ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಏರ್ಪಡಿಸಿದ್ದ ಪ್ರಥಮ ಸಾಮಾನ್ಯ ಸಭೆಯಲ್ಲಿ ವಿವರಗಳನ್ನು ನೀಡಿದರು.

ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಉದ್ಯೋಗ ಖಾತ್ರಿ ಕಾಮಗಾರಿಗಳಾಗಿಲ್ಲ. ಆದ್ದರಿಂದ ಬರುವ 15 ದಿನಗಳಲ್ಲಿ ಅಲ್ಲಿ ಕನಿಷ್ಠ 10 ಲಕ್ಷ ರೂಪಾಯಿಗಳ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  ಈ ವರೆಗೆ 7.63 ಕೋಟಿ ರೂಪಾಯಿ ಗಳನ್ನು ತಾಲ್ಲೂಕಿನ ಗ್ರಾಮ ಪಂಚಾಯಿತಗಳ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷ ಎಲ್.ಆರ್. ಗವಾನಿ ಅವರು, ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.ರೇಷನ್ ಕಾರ್ಡ್‌ಗಳಿಗಾಗಿ ನೆಮ್ಮದಿ ಕೇಂದ್ರಗಳ ಮೂಲಕ ಕೊಟ್ಟ ಅರ್ಜಿಗಳು ರದ್ದಾಗಿವೆ ಎಂದು ಮಹಿಳಾ ಸದಸ್ಯರು ದೂರಿದರು.ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ರಮೇಶ ಗಾಯಕವಾಡ ಆರೋಪಿಸಿದರು. ಹಾಸ್ಟೆಲಿನಲ್ಲಿ ಮೊಟ್ಟೆ ಹಾಗೂ ಬಾಳೆ ಹಣ್ಣುಗಳನ್ನು ಕೊಡುತ್ತಿಲ್ಲ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಕೋಳಿಗುಡ್ಡದ ಸದಸ್ಯೆ ಆಪಾದಿಸಿದರು.

ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ವರದಿಯನ್ನು ನೀಡಿದರು.ತಾ.ಪಂ. ಅಧ್ಯಕ್ಷ ಎಲ್.ಆರ್. ಗವಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರಾ ಮುನ್ಯಾಳ, ಸದಸ್ಯರಾದ ಬಾಳಾಸಾಬ ಪಾಟೀಲ, ಸುನೀಲ ಪಾಟೀಲ, ರಾವಸಾಬ ದೇಸಾಯಿ, ಶಂಕರ ಪೂಜಾರಿ, ಆರ್.ಎಚ್. ಗೊಂಡೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ನೂತನ ಕ್ರಿಯಾ ಯೋಜನೆಗೆ ಎಲ್ಲ ಸದಸ್ಯರು ಒಪ್ಪಿಗೆ  ನೀಡಿದರು.    ಎ.ಡಿ. ಮಾದರ ಸ್ವಾಗತಿಸಿದರು. ಎ.ಎಂ. ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.