ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿದ್ದರೂ, ಮಂಗಳವಾರ ಕೂಡ ಕೃಷ್ಣಾ ನದಿಗೆ 2,96,911 ಕ್ಯುಸೆಕ್ ನೀರು ಹರಿದು ಬಂದಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶ ವ್ಯಾಪ್ತಿಯ ಕೊಯ್ನಾದಲ್ಲಿ 10.7 ಸೆಂ.ಮೀ, ವಾರಣಾ 7.1 ಸೆಂ.ಮೀ, ಕಾಳಮ್ಮವಾಡಿ 9.1 ಸೆಂ.ಮೀ, ಮಹಾಬಲೇಶ್ವರದಲ್ಲಿ 15.8 ಸೆಂ.ಮೀ, ನವಜಾ 9.9 ಸೆಂ.ಮೀ, ರಾಧಾನಗರಿ 7.5 ಸೆಂ.ಮೀ ಮಳೆಯು ದಾಖಲಾಗಿದೆ. ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಕೃಷ್ಣಾ, ಪಂಚಗಂಗಾ, ದೂದಗಂಗಾ, ವೇದಗಂಗಾ ನದಿಗಳ ನೀರಿನ ಹರಿವು ಸ್ವಲ್ಪ ಇಳಿಮುಖವಾಗಿದೆ.
ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜಿನಲ್ಲಿ 2,49,894 ಕ್ಯುಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿ ಕೃಷ್ಣಾ ನದಿಗೆ ಸಂಗಮವಾಗುವ ದೂದಗಂಗಾ ನದಿಯಲ್ಲಿ ನೀರಿನ ಹರಿವು 46,520 ಕ್ಯುಸೆಕ್ ಆಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್‌ನ ಕೃಷ್ಣಾ ನದಿಗೆ 2,96,911 ಕ್ಯುಸೆಕ್ ನೀರು ಹರಿದು ಬರುತ್ತಿದೆ.
6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜಿನಲ್ಲಿ ಒಳ ಹರಿವು 2,95,644 ಕ್ಯುಸೆಕ್, ಹೊರ ಹರಿವು 2,94,894 ಕ್ಯುಸೆಕ್‌ನಷ್ಟಿದೆ. ಹೀಗಾಗಿ, ಕೃಷ್ಣಾ ಹಾಗೂ ಉಪ ನದಿಗಳ ಬೋರ್ಗರತೆ ಸ್ವಲ್ಪ ಕಡಿಮೆಯಾಗಿದ್ದು, ನದಿ ತೀರದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯ ಬಾರವಾಡ-60, ಸಿದ್ನಾಳ-60, ಹುನ್ನುರಗಿ-180, ಕುನ್ನುರ-76, ಮಮದಾಪೂರ ಕೆ ಎಲ್- 45, ಕಾರದಗಾ-5, ಅಥಣಿ ತಾಲ್ಲೂಕು ವ್ಯಾಪ್ತಿಯ ಹುಲಗಬಾಳಿಯಲ್ಲಿ–310, ಸಪ್ತಸಾಗರ-160, ನಾಗನೂರ ಪಿ.ಕೆ.-6, ನದಿ ಇಂಗಳಗಾಂವ-30, ಕಾಗವಾಡ ತಾಲ್ಲೂಕು ವ್ಯಾಪ್ತಿಯ ಶಹಾಪೂರ-76, ಬಣಜವಾಡ-12, ಕೃಷ್ಣಾ ಕಿತ್ತೂರ-130, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-30, ಇಂಗಳಿ-40, ಯಡೂರ-83, ಚಂದೂರ-38, ಜನವಾಡ-35 ರಾಯಬಾಗ ತಾಲ್ಲೂಕಿನ ಕುಡಚಿ-32, ಬಾವನ ಸವದತ್ತಿಯ 8 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಜಲಾವೃತಗೊಂಡ ಸೇತುವೆ, ದೇವಸ್ಥಾನಗಳ ಪರಿಸ್ಥಿತಿ ಎಂದಿನಂತೆಯೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.