ADVERTISEMENT

ಎರಡು ಶೈಕ್ಷಣಿಕ ಜಿಲ್ಲೆಗಳಲ್ಲೂ ಸುಧಾರಣೆ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 10:26 IST
Last Updated 14 ಜುಲೈ 2020, 10:26 IST

ಬೆಳಗಾವಿ: 2019–20ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಐದು ಸ್ಥಾನ ಮೇಲಕ್ಕೇರಿದೆ. ಬೆಳಗಾವಿಯು ಒಂದು ಸ್ಥಾನ ಬಡ್ತಿ ಪಡೆದಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.56.18ರಷ್ಟು ಫಲಿತಾಂಶದೊಂದಿಗೆ 28ನೇ ಸ್ಥಾನ ಪಡೆದಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಶೇ.59.7 ಫಲಿತಾಂಶ ಪಡೆದು 27ನೇ ಸ್ಥಾನಕ್ಕೇರಿದೆ. ಅಂತೆಯೇ 25ನೇ ಸ್ಥಾನ (ಶೇ.60.81 ಫಲಿತಾಂಶ) ಪಡೆದಿದ್ದ ಚಿಕ್ಕೋಡಿಯು ಈ ಬಾರಿ ಶೇ.63.88 ಫಲಿತಾಂಶದೊಂದಿಗೆ 20ನೇ ಸ್ಥಾನಕ್ಕೆ ಜಿಗಿದಿದೆ.

ಬೆಳಗಾವಿ ಜಿಲ್ಲೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಮುಂದೆ

ADVERTISEMENT

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 19,302 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 11,523 ಮಂದಿ ಉತ್ತೀರ್ಣರಾಗಿದ್ದಾರೆ. ಈ ಸಲವೂ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಹಾಜರಾಗಿದ್ದ 11,951 ಬಾಲಕಿಯರ ಪೈಕಿ 7,594 ಬಾಲಕಿಯರು (ಶೇ.63.54) ಪಾಸಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ.42.52ರಷ್ಟಿದೆ.

ಕನ್ನಡ ಮಾಧ್ಯಮದಲ್ಲಿ ಶೇ.44.01 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಶೇ.61.61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ವಲಯದಲ್ಲಿ ಶೇ.62.05 ವಿದ್ಯಾರ್ಥಿಗಳು ಪಾಸಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ.52.92 ವಿದ್ಯಾರ್ಥಿಗಳಷ್ಟೇ ತೇರ್ಗಡೆಯಾಗಿದ್ದಾರೆ. ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿದ್ಯಾರ್ಥಿಗಳೇ ಮುಂದಿದ್ದಾರೆ.

ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯ ಫಲಿತಾಂಶವು ಹೋದ ವರ್ಷಕ್ಕೆ ಹೋಲಿಸಿದರೆ ಶೇ 3.02ರಷ್ಟು ಹೆಚ್ಚಾಗಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ. 23,324 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 14,900 ಮಂದಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ 10,337ರಲ್ಲಿ 5,259, ವಾಣಿಜ್ಯ ವಿಭಾಗದಲ್ಲಿ 7,117 ವಿದ್ಯಾರ್ಥಿಗಳಲ್ಲಿ 5,114, ವಿಜ್ಞಾನ ವಿಭಾಗದಲ್ಲಿ 5,820 ವಿದ್ಯಾರ್ಥಿಗಳ ಪೈಕಿ 4,527 ಮಂದಿ ಉತ್ತೀರ್ಣರಾಗಿದ್ದಾರೆ.

ಕೊರೊನಾ ವೈರಾಣು ಭೀತಿಯ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳು ಜಾಲತಾಣಗಳಲ್ಲಿ ಫಲಿತಾಂಶ ವೀಕ್ಷಿಸಿದರು. ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೇ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮಾಡಲಾಗಿತ್ತು. ಇಲಾಖೆಯಿಂದ ಅಧಿಕೃತವಾಗಿ ಪ್ರಕಟ ಮಾಡುವುದಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗಿತ್ತು. ಕೆಲವು ವಿದ್ಯಾರ್ಥಿಗಳು ಬ್ರೌಸಿಂಗ್‌ ಸೆಂಟರ್‌ಗಳಲ್ಲಿ ಫಲಿತಾಂಶ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.