ADVERTISEMENT

‘3ನೇ ರೈಲ್ವೆ ಗೇಟ್‌ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್‌’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:27 IST
Last Updated 24 ಅಕ್ಟೋಬರ್ 2017, 5:27 IST

ಬೆಳಗಾವಿ: ನಗರದಲ್ಲಿ ಮತ್ತೊಂದು ರೈಲ್ವೆ ಮೇಲ್ಸೇತುವೆ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಖಾನಾಪುರ ರಸ್ತೆಯ 3ನೇ ರೈಲ್ವೆ ಗೇಟ್‌ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

‘ನಿಲ್ದಾಣದ ಬಳಿಯ ಮೇಲ್ಸೇತುವೆ ಕಾಮಗಾರಿಯು ಈಗ ಭರದಿಂದ ಸಾಗಿದೆ. ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದ ವಾಹನಗಳನ್ನು ಪರ್ಯಾಯ ಮಾರ್ಗಗಳತ್ತ ತಿರುಗಿಸಲಾಗಿದೆ. ಇದೇ ವೇಳೆ 3ನೇ ರೈಲ್ವೆ ಗೇಟ್‌ ದಾರಿಯನ್ನು ಬಂದ್‌ ಮಾಡಿ, ಮೇಲ್ಸೇತುವೆ ಕಾಮಗಾರಿ ಕೈಗೊಂಡರೆ ವಾಹನಗಳ ದಟ್ಟಣೆ ಎಷ್ಟಾಗಬಹುದು ಎನ್ನುವುದರ ಬಗ್ಗೆ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಸಂಚಾರ ಪೊಲೀಸರು ಸೂಕ್ತ ಮಾರ್ಗಗಳನ್ನು ರೂಪಿಸಿದರೆ ಹಾಗೂ ಸೂಕ್ತ ರೀತಿಯಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಿದರೆ, ಎರಡೂ ಕಾಮಗಾರಿಗಳನ್ನು ಒಟ್ಟಿಗೆ ನಡೆಸಲು ಸಾಧ್ಯವಿದೆ. ಪೊಲೀಸರು ನೀಡುವ ವರದಿಯನ್ನು ಆಧರಿಸಿ, 3ನೇ ರೈಲ್ವೆ ಗೇಟ್‌ ಮೇಲ್ಸೇತುವೆ ಕಾಮಗಾರಿ ಆರಂಭಿಸುವ ದಿನಾಂಕಗಳನ್ನು ನಿಗದಿಪಡಿಸಲಾಗುವುದು ಎಂದು ನುಡಿದರು.

ADVERTISEMENT

ವಾಯುವಿಹಾರಿಗಳಿಗೆ ಫುಟ್‌ಪಾಥ್‌: ‘ರೈಲ್ವೆ ನಿಲ್ದಾಣದ ಬಳಿ ಈಗ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ದಂಡುಪ್ರದೇಶದ ಅಧಿಕಾರಿಗಳು, ಸೇನಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎಂದರು.

ಪ್ರೊಫೆಷನಲ್‌ ಫೋರಂ ಅಧ್ಯಕ್ಷ ಬಿ.ಎಸ್‌. ಪಾಟೀಲ ಮಾತನಾಡಿ, ಈ ಭಾಗದಲ್ಲಿ ಮೇಲ್ಸೇತುವೆ ಮೂಲಕ ಪ್ರತಿದಿನ ನೂರಾರು ಜನರು ವಾಯುವಿಹಾರಕ್ಕೆ ತೆರಳುತ್ತಾರೆ. ಇವರಿಗಾಗಿ ಫುಟ್‌ಪಾಥ್‌ ನಿರ್ಮಿಸಬೇಕು ಎಂದು ಕೋರಿಕೊಂಡರು. ಇವರ ಮನವಿಗೆ ಸ್ಪಂದಿಸಿದ ಸುರೇಶ ಅವರು ಅಧಿಕಾರಿಗಳಿಗೆ ಫುಟ್‌ಪಾಥ್‌ ನಿರ್ಮಿಸುವಂತೆ ಸೂಚನೆ ನೀಡಿದರು.

ಮಾರ್ಚ್‌ 31ರೊಳಗೆ ಪೂರ್ಣಗೊಳಿಸಿ: ರೈಲ್ವೆ ನಿಲ್ದಾಣದ ಬಳಿಯ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಮಾರ್ಚ್‌ 31ರೊಳಗೆ ಪೂರ್ಣಗೊಳಿಸಬೇಕು. ಮುಂದಿನ ಮಳೆಗಾಲ ಆರಂಭವಾಗುವುದರೊಳಗೆ ಸೇತುವೆ ಮೇಲೆ ವಾಹನಗಳು ಸಂಚರಿಸುವಂತಾಗಬೇಕು ಎಂದು ಸಂಸದರು ಹೇಳಿದರು.
‘ಕಾಮಗಾರಿ ನಡೆಯುವ ಸ್ಥಳವು ಸೇನಾ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಸೇನಾಧಿಕಾರಿಗಳ ಪೂರ್ವಾನುಮತಿಯನ್ನು ಕೂಡ ಪಡೆದುಕೊಂಡಿದ್ದೇವೆ’ ಎಂದು ತಿಳಿಸಿದರು.

ತೆರವಿಗೆ ಕ್ರಮ: ಗೋವಾವೇಸ್‌ ವೃತ್ತದ ಕಡೆ ಸಾಗುವ ಮೇಲ್ಸೇತುವೆಯ ಇನ್ನೊಂದು ತುದಿಯಲ್ಲಿ ನಾಲ್ಕಾರು ಮನೆಗಳು ಅಕ್ರಮವಾಗಿ ನಿರ್ಮಾಣವಾಗಿವೆ. ಇವುಗಳನ್ನು ತೆರವುಗೊಳಿಸುವುದಾಗಿ ಮಹಾನಗರ ಪಾಲಿಕೆಯ ದಕ್ಷಿಣ ವಿಭಾಗದ ಎಂಜಿನಿಯರ್‌ ಲಕ್ಷ್ಮಿ ಸುಳಗೇಕರ್ ಹೇಳಿದರು.

ಪ್ರಸ್ತುತ ಈ ಮೇಲ್ಸೇತುವೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ವಿಸ್ತರಿಸಲಾಗುತ್ತಿದೆ. 46 ಮೀಟರ್‌ ಅಗಲ ವಿಸ್ತರಿಸಲಾಗುತ್ತಿದೆ. ಈ ರಸ್ತೆಯ ಪಕ್ಕದ ಜಾಗದಲ್ಲಿ ನಾಲ್ಕಾರು ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದ್ದು, ಇವುಗಳ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸದ್ಯದಲ್ಲಿಯೇ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಸಾಧುವಲ್ಲ: ರೈಲ್ವೆ ನಿಲ್ದಾಣ ಬಳಿಯ ಗೋಗಟೆ ವೃತ್ತದಲ್ಲಿ ಮೇಲ್ಸೇತುವೆಯನ್ನು ಕೊನೆಗೊಳಿಸುವ ಬದಲು, ವೃತ್ತವನ್ನು ದಾಟಿ, ಎಸ್‌ಬಿಐವರೆಗೆ ವಿಸ್ತರಿಸಬೇಕು. ಇದರಿಂದ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ ಅನ್ನು ತಪ್ಪಿಸಬಹುದಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸ್ಥಳೀಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಅಭಿಪ್ರಾಯವನ್ನು ಸಂಸದರು ತಿರಸ್ಕರಿಸಿದರು. ಈಗಾಗಲೇ ಮೇಲ್ಸೇತುವೆಯ ನೀಲ ನಕ್ಷೆ ಸಿದ್ಧವಾಗಿದೆ. ಇದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ಇದಕ್ಕೆ ತಕ್ಕಂತೆ ಸುಮಾರು ₹ 14 ಕೋಟಿ ಅನುದಾನ ಕೂಡ ಬಿಡುಗಡೆಯಾಗಿದೆ. ಈಗ ಮೇಲ್ಸೇತುವೆಯ ನಕ್ಷೆಯನ್ನು ಬದಲಾಯಿಸುವುದಾಗಲೀ, ವಿಸ್ತರಿಸುವುದಾಗಲೀ ಸಾಧ್ಯವಿಲ್ಲ.

ಈ ಬದಲಾವಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಪ್ಪಬೇಕಲ್ಲ. ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸುವವರು ಯಾರು? ಎಂದು ಅವರು ಪ್ರಶ್ನಿಸಿದರು.
ದಂಡುಪ್ರದೇಶದ ಸಿಇಒ ದಿವ್ಯಾ ಶಿವರಾಂ, ರೈಲ್ವೆ ಇಲಾಖೆಯ ಎಂಜಿನಿಯರ್‌ ಅಮರಗೊಂಡಪ್ಪ, ಬಿಎಸ್‌ಎನ್‌ಎಲ್‌ ಪ್ರಧಾನ ವ್ಯವಸ್ಥಾಪಕ ದೀಪಕ್‌ ತಾಯಲ್‌, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.