ADVERTISEMENT

ಚಾಕು ತೋರಿಸಿ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:24 IST
Last Updated 25 ಜೂನ್ 2019, 15:24 IST
ರಾಹುಕ್ ನಾಯಕವಾಡಿ
ರಾಹುಕ್ ನಾಯಕವಾಡಿ   

ಬೆಳಗಾವಿ: ಇಲ್ಲಿನ ಬಿ.ಎಸ್. ಯಡಿಯೂರಪ್ಪ ರಸ್ತೆಯ ಬಾರೊಂದರ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ, ಪ್ರಾಣ ಬೆದರಿಕೆ ಹಾಕಿ ಅವರಿಂದ ಹಣ ಮತ್ತು ಮೊಬೈಲ್‌ ಕಳವು ಮಾಡಿದ್ದ ಆರೋಪದ ಮೇಲೆ ಮೂವರನ್ನು ಶಹಾಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶಹಾಪುರದ ನವೀಗಲ್ಲಿಯ ಆಟೊರಿಕ್ಷಾ ಚಾಲಕ ರಾಹುಲ್‌ ನಾಯಕವಾಡಿ (24), ಖಾಸಬಾಗ್ ಮಾರುತಿಗಲ್ಲಿಯಲ್ಲಿ ಪೆಂಡಾಲ್‌ ಕೆಲಸ ಮಾಡುವ ಅಕ್ಷಯ ಹಿರೇಕಠ (21) ಹಾಗೂ ಕೂಲಿ ಮಾಡುವ ಆಕಾಶ ಹಿರೇಕರ (21) ಬಂಧಿತರು.

ಗೋಮಟೇಶ ವಿದ್ಯಾಪೀಠದ ‘ಡಿ’ ಗ್ರೂಪ್ ನೌಕರ, ಅಲಾರವಾಡದ ನಿವಾಸಿ ಸಣ್ಣಕಲ್ಲಪ್ಪ ಜನಗೌಡ ಎನ್ನುವವರು ದೂರು ನೀಡಿದ್ದರು. ‘ಸೋಮವಾರ ಸಂಜೆ ಕೆಲಸ ಮುಗಿಸಿ 5.20ರ ಸುಮಾರಿಗೆ ಹೋಗುವಾಗ ಇಬ್ಬರು ನಂಬರ್ ಪ್ಲೇಟ್ ಇಲ್ಲದ ಸುಜುಕಿ ಅಕ್ಸೆಸ್ ಸ್ಕೂಟರ್‌ನಲ್ಲಿ ಬಂದು ತಡೆದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯು ನನಗೆ ಚಾಕು ತೋರಿಸಿ ಜೇಬಿನಲ್ಲಿರುವ ಹಣ ಕೊಡುವಂತೆ ಹೆದರಿಸಿದ. ಇನ್ನೊಬ್ಬ ಕರವಸ್ತ್ರವನ್ನು ಕೊರಳಿಗೆ ಹಾಕಿ ಬಿಗಿದು, ಶರ್ಟ್‌ನ ಜೇಬಿನಲ್ಲಿದ್ದ ₹ 14,500 ಮೌಲ್ಯದ ಮೊಬೈಲ್ ಫೋನ್ ಕಿತ್ತುಕೊಂಡ. ಆಗ ಬಂದ ಇನ್ನೊಬ್ಬ ಪ್ಯಾಂಟ್‌ನ ಜೇಬಿನಲ್ಲಿದ್ದ ₹ 2ಸಾವಿರ ಕಿತ್ತುಕೊಂಡ. ಇದನ್ನು ಕಂಡ ಸ್ಥಳೀಯರು ಬಂದು ಅವರನ್ನು ಹಿಡಿದು ಹಲ್ಲೆ ನಡೆಸಿದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾದರು’ ಎಂದು ದೂರಿನಲ್ಲಿ ತಿಳಿಸಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡ ಶಹಾಪುರ ಠಾಣೆ ಪೊಲೀಸರು ಇನ್‌ಸ್ಪೆಕ್ಟರ್‌ ಜಾವೇದ್ ಮುಶಾಪುರಿ ನೇತೃತ್ವದಲ್ಲಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.