ADVERTISEMENT

35 ಹಳ್ಳಿಗಳು ಬೈಲಹೊಂಗಲ ತಾಲ್ಲೂಕು ವ್ಯಾಪ್ತಿಗೆ: ಹೋರಾಟಗಾರರಲ್ಲಿ ಪರ– ವಿರೋಧ

ಸಂತೋಷ ಈ.ಚಿನಗುಡಿ
Published 22 ಡಿಸೆಂಬರ್ 2025, 4:28 IST
Last Updated 22 ಡಿಸೆಂಬರ್ 2025, 4:28 IST
ಮುರಗೋಡ ತಾಲ್ಲೂಕು ರಚೆನೆಗೆ ಆಗ್ರಹಿಸಿ 2018–19ರಲ್ಲಿ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಧರಣಿ
ಮುರಗೋಡ ತಾಲ್ಲೂಕು ರಚೆನೆಗೆ ಆಗ್ರಹಿಸಿ 2018–19ರಲ್ಲಿ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಧರಣಿ   

ಬೆಳಗಾವಿ: ಮುರಗೋಡ ಸೇರಿ 35 ಹಳ್ಳಿಗಳಲ್ಲಿ ಸವದತ್ತಿ ತಾಲ್ಲೂಕಿನಿಂದ ಬೇರ್ಪಡಿಸಿ, ಬೈಲಹೊಗಲ ತಾಲ್ಲೂಕಿನ ಸೇರಿಸಬೇಕೆಂಬುದು ಐತಿಹಾಸಿಕ ನಿರ್ಧಾರ. ಇದಕ್ಕೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಈ ಭಾಗದ ಮೂರು ದಶಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಆದರೆ, ವಿಷಯ ಇಷ್ಟಕ್ಕೆ ಮುಗಿದಿಲ್ಲ. ಈ ನಿರ್ಧಾರದ ಬಗ್ಗೆ ಪರ ಹಾಗೂ ವಿರೋಧ ಜನಾಭಿಪ್ರಾಯಗಳೂ ವ್ಯಕ್ತವಾಗಿವೆ.

ಇಷ್ಟು ವರ್ಷ ಕಂದಾಯ ವ್ಯವಹಾರಗಳಿಗೆ ಮಾತ್ರ ಸವದತ್ತಿಗೆ ಸೀಮಿತವಾಗಿದ್ದ ಈ ಹಳ್ಳಿಗಳ ಜನರ ಬದುಕು– ಬವಣೆ– ಭಾವನೆ ಎಲ್ಲವೂ ಬೈಲಹೊಂಗಲ ಜತೆಗೇ ಇದೆ. 

ರಟ್ಟ ಅರಸರ ಕಾಲದಿಂದಲೂ ಈ ಹಳ್ಳಿಗಳು ಸವದತ್ತಿ ಕೇಂದ್ರಿದ ಆಡಳಿತದಲ್ಲಿದ್ದವು. ಸ್ವಾತಂತ್ರ್ಯ ನಂತರದ ತಾಲ್ಲೂಕು ವಿಭಜನೆಯಾದಾಗಲೂ ಸವದತ್ತಿಯನ್ನೇ ಸೇರಿಕೊಂಡವು. ಕಂದಾಯ ದಾಖಲೆಗಳ ಸಂಗ್ರಹ ಹಾಗೂ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ವಿಭಜನೆ ನಡೆದಿತ್ತು. ಆದರೆ, ಬೈಲಹೊಂಗಲ ಹಾಗೂ ಸವದತ್ತಿ ತಾಲ್ಲೂಕುಗಳ ರಚನೆ ಅವೈಜ್ಞಾನಿವಕಾಗಿದೆ ಎಂಬ ದೂರುಗಳು ದಶಕಗಳಿಂದಲೂ ಬರುತ್ತಲೇ ಇದ್ದವು. 

ADVERTISEMENT

ಸರ್ಕಾರ ಇದಕ್ಕೆ ಮಂಗಳ ಹಾಡಿದೆ. ಮುರಗೋಡ ಹೋಬಳಿ ಜನರ ಮೂರು ದಶಕಗಳ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಇಷ್ಟು ವರ್ಷ ಮಲಪ್ರಭೆಯ ನೆರಳಲ್ಲಿದ್ದ ಹಳ್ಳಿಗರು ಇನ್ನು ಮುಂದೆ ರಾಣಿ ಚನ್ನಮ್ಮನ ಮಡಿಲಲ್ಲಿ ಆಶ್ರಯ ಪಡೆಯಲಿದ್ದಾರೆ. 

ತಾಲ್ಲೂಕು ಆಡಳಿತವನ್ನು ಸುಗಮಗೊಳಿಸುವುದು ಮತ್ತು ಜನರ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬೈಲಹೊಂಗಲಕ್ಕೆ ಕೂಗಳತೆ ದೂರದಲ್ಲಿ ಇರುವ ಹಲವು ಹಳ್ಳಿಗಳು ಸವದತ್ತಿ ತಾಲ್ಲೂಕಿಗೆ ಸೇರಿವೆ. ಹಳ್ಳಿಗಳ ವಿದ್ಯಾರ್ಥಿಗಳು, ರೈತರು, ಮಹಿಳೆಯರು, ನೌಕರರು ಯಾವುದೇ ಕೆಲಸಕ್ಕೂ ಸಮೀಪದ ಬೈಲಹೊಂಗಲ ಬಿಟ್ಟು ದೂರದ ಸವದತ್ತಿಗೆ ಅಲೆಯಬೇಕಾಗಿದೆ.

ಬೈಲಹೊಂಗಲದಿಂದ ಮರಕುಂಬಿ ಗ್ರಾಮ ಕೇವಲ 3 ಕಿ.ಮೀ ದೂರದಲ್ಲಿದೆ. ಆದರೆ, ಇದು 40 ಕಿ.ಮೀ ದೂರದ ಸದ್ಯ ಸವದತ್ತಿ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಿದೆ. ಹಾರೂಗೊಪ್ಪ, ಇಂಚಲ ಹಾಗೂ ಹೊಸೂರು ಹಳ್ಳಿಗಳು 5 ಕಿ.ಮೀ ಒಳಗಿವೆ. ಚಚಡಿ ಗ್ರಾಮ 10 ಕಿ.ಮೀ ಅಂತರದಲ್ಲಿದೆ. ಆದರೆ, ಇವುಗಳ ತಾಲ್ಲೂಕು ಕೇಂದ್ರ 40ರಿಂದ 50 ಕಿ.ಮೀ ದೂರದ ಸವದತ್ತಿ.

ಸಣ್ಣ ಪ್ರಮಾಣ ಪತ್ರಕ್ಕೆ, ಪತ್ರ ವ್ಯವಹಾರಗಳಿಗೆ, ಆಸ್ತಿ ನೋಂದಣಿಗೆ, ಜನನ– ಮರಣ ಪ್ರಮಾಣ ಪತ್ರ, ಆಸ್ತಿ ನೋಂದಣಿ ಸೇರಿದಂತೆ ಪ್ರತಿಯೊಂದಕ್ಕೂ ಜನ ಕನಿಷ್ಠ 40 ಕಿ.ಮೀ ಪ್ರಯಾಣ ಮಾಡಬೇಕಾಗಿದೆ. ಇವುಗಳನ್ನು ಬೈಲಹೊಂಗಲಕ್ಕೆ ಸೇರಿಸಿದರೆ ಕೇವಲ 5ರಿಂದ 15 ನಿಮಿಷಗಳಲ್ಲಿ ತಾಲ್ಲೂಕು ಕೇಂದ್ರ ತಲುಪುತ್ತಾರೆ. ಹೀಗಾಗಿ, ತಾಲ್ಲೂಕು ಕೇಂದ್ರ ಬದಲಾಯಿಸುವಂತೆ ಈ ಭಾಗದ ಜನ ದಶಕಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದರು. ಆದರೆ, ಮತಗಳ ವಿಭಜನೆಯ ಕಾರಣ ಜನಪ್ರತಿನಿಧಿಗಳು ಇದಕ್ಕೆ ಮನಸ್ಸು ಮಾಡಿರಲಿಲ್ಲ. 

ಯಾವ ತಾಲ್ಲೂಕಿಗೆ ಎಷ್ಟು ಹಳ್ಳಿ: ಐದು ವರ್ಷಗಳ ಹಿಂದೆ ಸವದತ್ತಿ ತಾಲ್ಲೂಕನ್ನು ವಿಭಜಿಸಿ ಯರಗಟ್ಟಿ ಕೇಂದ್ರವಾಗಿ ಹೊಸ ತಾಲ್ಲೂಕು ರಚನೆ ಮಾಡಲಾಗಿದೆ. ಈಗ ಸವದತ್ತಿ ತಾಲ್ಲೂಕಿನಲ್ಲಿ 32 ಗ್ರಾಮ ಪಂಚಾಯಿತಿ, 88 ಗ್ರಾಮಗಳಿವೆ. 12 ಗ್ರಾಮ ಪಂಚಾಯಿತಿ ಹಾಗೂ 33 ಹಳ್ಳಿಗಳಲ್ಲಿ ಕೂಡಿಸಿ ಯರಗಟ್ಟಿ ತಾಲ್ಲೂಕು ರಚನೆ ಮಾಡಲಾಗಿದೆ. ಸದ್ಯ ಸವದತ್ತಿಯಲ್ಲಿ ಉಳಿದ 88 ಹಳ್ಳಿಗಳ ಪೈಕಿ 35ನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಬೈಲಹೊಂಗಲ ತಾಲ್ಲೂಕಿನ ಹಳ್ಳಿಗಳ ಸಂಖ್ಯೆ 117ಕ್ಕೆ ಏರಲಿದೆ. ಆದರೆ, ಸವದತ್ತಿ ತಾಲ್ಲೂಕು ಹಳ್ಳಿಗಳ ಸಂಖ್ಯೆ 53ಕ್ಕೆ ಇಳಿಯಲಿದೆ.

32 ಹಳ್ಳಿ, 3 ಹದ್ದಿಗಳು: ಈ 35 ಪ್ರದೇಶಗಳಲ್ಲಿ 32 ಮಾತ್ರ ಹಳ್ಳಿಗಳಿವೆ. ಮೂರು ಹದ್ದಿಗಳಿವೆ. ಅಂದರೆ; ಆ ಪ್ರದೇಶಕ್ಕೆ ಊರಿನ ಹೆಸರಿದೆ ಆದರೆ, ಊರು ಇಲ್ಲ. ಬತ್ತರಗಿ, ಗುಂಡ್ಲೂರು ಮತ್ತು ಚಳಕೊಪ್ಪ ಜನರಿಲ್ಲದ ಊರುಗಳು.

ಮುರಗೋಡ, ಸುಬ್ಬಾಪುರ, ರಾಮಾಪುರ, ರಾಮಾಪುರ ತಾಂಡಾ, ಬಸರಗಿ ಕೆ.ಎಂ, ಚಚಡಿ, ಗುಂಡ್ಲೂರ, ಹಾರೂಗೊಪ್ಪ, ಗೋಂತಮಾರ, ತಡಸಲೂರ, ಹಲಕಿ, ಹಲಕಿ ತಾಂಡಾ, ಹೂಲಿಕೇರಿ ತಾಂಡಾ, ಜಂಗಮ ಬುಡಕಟ್ಟಿ, ಹಿರೇಬುದನೂರ, ಚಿಕ್ಕಬುದನೂರ, ಮಳಗಲಿ, ಕುಟ್ರನಟ್ಟಿ, ಓಬಲದಿನ್ನಿ, ಇಂಚಲ, ಮುತವಾಡ, ಮರಕುಂಬಿ, ಚಿಕ್ಕೊಪ್ಪ ಕೆ.ಎಂ, ಹಿರೇಕೊಪ್ಪ ಕೆ.ಎಂ, ಹೊಸೂರ, ಮಲ್ಲೂರ, ಮಾತೊಳ್ಳಿ, ಸೊಗಲ, ಇಂಗಳಗಿ, ಕಾಗಿಹಾಳ, ಕಾಗಿಹಾಳ ತಾಂಡಾ, ರುದ್ರಾಪುರ, ಗಿರಿನಗರ, ಕಾರಿಮಣಿ, ದುಂಡನಕೊಪ್ಪ ಇವು ಸವದತ್ತಿಯ ಸಂಬಂಧ ಕಳಚಿಕೊಂಡ ಊರುಗಳು.

ಮುಂಬರುವ ಸವಾಲುಗಳೇನು?

ಬೈಲಹೊಂಗಲ ಇನ್ನು ಮುಂದೆ 117 ಹಳ್ಳಿಗಳನ್ನು ಒಳಗೊಂಡ ಜಿಲ್ಲೆಯ ದೊಡ್ಡ ತಾಲ್ಲೂಕು ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಆದರೆ ಇದು ಅಷ್ಟು ಸುಲಭವೂ ಅಲ್ಲ. ಒಬ್ಬ ತಹಶೀಲ್ದಾರ್‌ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷಿ ಅಧಿಕಾರಿ ಸೇರಿದಂತೆ ಯಾವೆಲ್ಲ ಕೆಸಲಗಳಿಗೂ 117 ತಾಲ್ಲೂಕುಗಳನ್ನು ಸುತ್ತುವುದು ಸುಲಭವೇ ಎಂಬ ಪ್ರಶ್ನೆ ಎತ್ತಿದ್ದಾರೆ ಮುರಗೋಡ ತಾಲ್ಲೂಕು ಹೋರಾಟದಲ್ಲಿ ನಿರತ ಎಫ್‌.ಎಸ್‌.ಸಿದ್ದನಗೌಡರ. ಜತೆಗೆ ಈಗಾಗಲೇ ಮುರಗೋಡದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಕೃಷಿ ಇಲಾಖೆ ಕಚೇರಿ ಪೊಲೀಸ್‌ ಠಾಣೆಗಳನ್ನು ವಿಲೀನ ಮಾಡಕೂಡದು. ಬೈಲಹೊಂಗಲಕ್ಕೆ ಹೋಬಳಿಯನ್ನು ಸೇರಿಸಿರಬಹುದು; ಆದರೆ ಮುರಗೋಡದ ಕಚೇರಿಗಳನ್ನು ಇಲ್ಲೇ ಮುಂದುವರಿಸಬೇಕು ಎಂಬುದು ಅವರ ಆಗ್ರಹ. 

ಇದು ಸಮಾಧಾನ ಮಾತ್ರ. ತೃಪ್ತಿದಾಯಕ ಅಲ್ಲ. ನಾವು ಮುರಗೋಡ ಕೇಂದ್ರವಾಗಿ ತಾಲ್ಲೂಕು ರಚನೆ ಮಾಡಿ ಎಂಬ ಹೋರಾಟ ಮಾಡುತ್ತಿದ್ದೇವೆ. ಈಗ ತಾಲ್ಲೂಕು ಕೇಂದ್ರ ಹತ್ತಿರವಾಗಬಹುದು. ಆದರೆ ಹೊಸ ತಾಲ್ಲೂಕಿನ ಹೋರಾಟ ಹಾಗೇ ಇರುತ್ತದೆ. ಅಂದಾಜು 2.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಪ್ರದೇಶವನ್ನು ತಾಲ್ಲೂಕು ಮಾಡದೇ ಬೇರೆ ದಾರಿ ಇಲ್ಲ.
–ಎಫ್‌.ಎಸ್‌.ಸಿದ್ದನಗೌಡ ಮುರಗೋಡ ತಾಲ್ಲೂಕು ಹೋರಾಟಗಾರ
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರ ಪ್ರಯತ್ನವೂ ಈ ಯಶಸ್ಸಿಗೆ ಕಾರಣ. ಕಂದಾಯ ಕೆಲಸ ಕೋರ್ಟ್‌ ಕಚೇರಿ ಶಿಕ್ಷಣಕ್ಕೆ ದೂರದ ಸವದತ್ತಿಗೆ ಹೋಗಬೇಕಾಗಿತ್ತು. ಈಗ ಬೈಲಹೊಂಗಲ ಎಲ್ಲದಕ್ಕೂ ಸಮೀಪ ಆಗುವುದರಿಂದ ಜನರ ಹಣ ಸಾರಿಗೆ ವೆಚ್ಚ ಸಮಯ ಹಾಗೂ ತುರ್ತು ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳು ನಿವಾರಣೆ ಆಗಲಿವೆ. ಈ ವಿಂಗಡಣೆ ಕೆಲಸ ವಿಳಂಬ ಮಾಡಬಾರದು.
–ಜಿ.ಬಿ.ಗಿರಿಜನ್ನವರ ವಕೀಲರು ಬೈಲಹೊಂಗಲ
ಹಳ್ಳಿಗಳನ್ನು ಬೈಲಹೊಂಗಲಕ್ಕೆ ಸೇರಿಸಬೇಕು ಎಂಬುದು ನಮ್ಮ ಹೋರಾಟದ ಉದ್ದೇಶವಾಗಿರಲಿಲ್ಲ. ಪ್ರತ್ಯೇಕ ತಾಲ್ಲೂಕು ರಚನೆ ಮಾಡಬೇಕು ಎಂಬುದೇ ಗುರಿ. ಈಗ ನಡೆದ ಬೆಳವಣಿಗೆಯಿಂದ ತಾಲ್ಲೂಕು ಹೋರಾಟಕ್ಕೆ ಹಿನ್ನಡೆ ಆಗಿದೆ. ಇದಕ್ಕೆ ನನ್ನ ವಿರೋಧವಿದೆ.
–ಶಂಕರಯ್ಯ ಮಲ್ಲಯ್ಯನವರ ಮುರಗೋಡ ತಾಲ್ಲೂಕು ಹೋರಾಟಗಾರ
ಬೈಲಹೊಂಗಲಕ್ಕೆ 35 ಹಳ್ಳಿ ಸೇರಿಸಿದ ನಿರ್ಧಾರ ಸಮರ್ಪಕವಾಗಿದೆ. ನಮಗೆ ಐತಿಹಾಸಿಕ ಮಹತ್ವವೂ ಸಿಕ್ಕಂತಾಗಿದೆ. ಹೊಸ ತಾಲ್ಲೂಕು ಹೋರಾಟ ಬೇಡ. ಬೈಲಹೊಂಗಲವೇ ಹಿಂದಿನಿಂದಲೂ ನಮ್ಮ ಭಾವನಾತ್ಮಕ ತಾಲ್ಲೂಕು ಆಗಿದೆ.
–ಮುರಳೀಧರ ಹುಲ್ಲೂರ ಹಿರಿಯರು ಮುರಗೋಡ

ಶಾಸಕರು ಮಠಾಧೀಶರ ನೇತೃತ್ವ

1988ರಿಂದ ಶಿವಾನಂದ ಕೌಜಲಗಿ ಅವರು ಶಾಸಕರಾದ ನಂತರದಿಂದಲೇ ಈ ಹಳ್ಳಿಗಳನ್ನು ಬೈಲಹೊಂಗಲಕ್ಕೆ ಸೇರಿಸುವ ವಿಚಾರ ಆರಂಭವಾಯಿತು. ಸದ್ಯ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಸದ್ದಿಲ್ಲದೆಯೇ ಈ ಕೆಲಸದಲ್ಲಿ ಯಶಸ್ಸು ಸಾಧಿಸಿದ್ದಾರೆ. ಮುರಗೋಡಗೆ ಪೊಲೀಸ್‌ ಠಾಣೆ ಇರುವ ಕಾರಣ ಇಲ್ಲಿನ ಪ್ರಕರಣಗಳೆಲ್ಲ ಸವದತ್ತಿ ನ್ಯಾಯಾಲಯಕ್ಕೆ ಹೋಗಬೇಕಾದ ಅನಿವಾರ್ಯ ಇತ್ತು. ಅದನ್ನು ತಪ್ಪಿಸಲು ಶಾಸಕರು ಈ ಬದಲಾವಣೆಗೆ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲಿಂದ 2019ರವರೆಗೂ ಸಾಕಷ್ಟು ಹೋರಾಟ ನಡೆದವು. ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕೂಡ ನಡೆಯಿತು. ಇದೊಂದು ಅಧ್ಯಾಯವಾದರೆ 2020ರಿಂದ ಹೊಸ ಅಧ್ಯಾಯ ಆರಂಭವಾಯಿತು. ಆಗ ಹೊಸ ತಾಲ್ಲೂಕುಗಳ ರಚನೆ ಮಾಡಲಾಯಿತು. ಆದರೆ ಮುರಗೋಡನ್ನು ನಿರ್ಲಕ್ಷ್ಯ ಮಾಡಿದ್ದು ಹೋರಾಟಗಾರರನ್ನು ಕೆರಳಿಸಿತು. ಹೀಗಾಗಿ ವಿಭಜನೆಗೆ ಪಟ್ಟು ಹಿಡಿದರು.

ಜಿಲ್ಲಾ ಕೇಂದ್ರದ ಕೂಗು ಮತ್ತಷ್ಟು ಗಟ್ಟಿ

ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚಿಸಬೇಕು ಎಂಬ ಬೇಡಿಕೆ ಮೂರು ದಶಕಗಳಿಂದಲೂ ಇದೆ. ಈಗ 35 ಹಳ್ಳಿಗಳನ್ನು ಸೇರಿಸುವ ಮೂಲಕ ಈ ತಾಲ್ಲೂಕು ಬೃಹದಾಕಾರ ಹೊಂದಿದೆ. ಕೊಡಗು ಜಿಲ್ಲೆಯಲ್ಲಿ 5 ಲಕ್ಷದಷ್ಟು ಜನಸಂಖ್ಯೆ ಇದೆ. ಆದರೆ ಈಗ ಬೈಲಹೊಗಲ ತಾಲ್ಲೂಕಿನಲ್ಲೇ ಅದಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹೀಗಾಗಿ. ಹೊಸ ಜಿಲ್ಲಾ ಕೇಂದ್ರದ ಕೂಗು ಈಗ ಮತ್ತಷ್ಟು ಗಟ್ಟಿಯಾಗಿದೆ ಎನ್ನುತ್ತಾರೆ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.