ADVERTISEMENT

ರಾಜ್ಯ ನೇತ್ರೌಷಧ ಸಮ್ಮೇಳನ ನಾಳೆಯಿಂದ

1200 ಪ್ರತಿನಿಧಿಗಳು ಭಾಗಿ, ವಿಚಾರ ವಿನಿಮಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 13:57 IST
Last Updated 6 ನವೆಂಬರ್ 2019, 13:57 IST

ಬೆಳಗಾವಿ: ಕರ್ನಾಟಕ ನೇತ್ರೌಷಧ ಸೊಸೈಟಿ, ಬೆಳಗಾವಿ ನೇತ್ರೌಷಧ ಸಂಘ, ಜೆಎನ್‌ಎಂಸಿ ಹಾಗೂ ಕೆಎಲ್‌ಇ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ನೆಹರೂ ನಗರದ ಜೆಎನ್‌ಎಂಸಿಯ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ನ. 8ರಿಂದ 10ರವರೆಗೆ ‘ಕಾಸ್ಕಾನ್‌–2019’ 38ನೇ ರಾಜ್ಯ ನೇತ್ರೌಷಧ ಸಮ್ಮೇಳನ ಆಯೋಜಿಸಲಾಗಿದೆ.

‘8ರಂದು ಸಂಜೆ 5ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಕರ್ನಾಟಕ ನೇತ್ರೌಷಧ ಸೊಸೈಟಿ ಅಧ್ಯಕ್ಷ ಡಾ.ಎನ್.ಎಸ್. ಮುರಳೀಧರ, ಕಾರ್ಯದರ್ಶಿ ಡಾ.ಕೃಷ್ಣಪ್ರಸಾದ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು’ ಎಂದು ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಡಾ.ಅರವಿಂದ ತೆನಗಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘16 ವರ್ಷಗಳ ನಂತರ ಇಲ್ಲಿ ಸಮ್ಮೇಳನ ಆಯೋಜಿಸುವ ಅವಕಾಶ ದೊರೆತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ವಿದೇಶದವರೂ ಸೇರಿದಂತೆ 1,200ಕ್ಕೂ ಹೆಚ್ಚಿನ ನೇತ್ರ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಬಂಧಗಳನ್ನು ಮಂಡಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸರ್ಜರಿಗಳ ನೇರಪ್ರಸಾರ, ವಿಡಿಯೊ ಮೂಲಕ ಕೌಶಲಗಳನ್ನು ತಿಳಿಸುವುದು, ವಿಚಾರ ವಿನಿಮಯ, ಹೊಸ ಅನ್ವೇಷಣೆಗಳನ್ನು ಬಳಸಿಕೊಳ್ಳುವ ಬಗೆ, ಸಂವಾದ, ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಯಲಿದೆ. 9ರಂದು ಸಂಜೆ 7ಕ್ಕೆ ಬಾಲಿವುಡ್‌ ಗಾಯಕಿ ಕವಿತಾ ಪಾಡ್ವಾಲ್‌ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಕೃಷ್ಣಪ್ರಸಾದ್‌ ಅವರನ್ನು ಸತ್ಕರಿಸಲಾಗುವುದು’ ಎಂದರು.

‘ಕೆಎಲ್‌ಇ ಜೆಎನ್‌ಎಂಸಿಯಲ್ಲಿ ನೇತ್ರ ಭಂಡಾರವಿದೆ. ವಾರ್ಷಿಕ 60ರಿಂದ 70 ನೇತ್ರಗಳನ್ನು ದಾನವಾಗಿ ಪಡೆದು ಸಂಗ್ರಹಿಸಲಾಗುತ್ತಿದೆ. ಇವುಗಳಲ್ಲಿ 18ರಿಂದ 20 ನೇತ್ರಗಳನ್ನು ಕಸಿ ಮಾಡುತ್ತಿದ್ದೇವೆ. ಕಸಿಗೆ ಯೋಗ್ಯವಲ್ಲದವುಗಳನ್ನು ಸಂಶೋಧನೆ ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸುವ ಉದ್ದೇಶಕ್ಕೆಂದು ಬಳಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಡಾ.ವಿನಯ್ ದಾಸ್ತಿಕೊಪ್ಪ ಮಾತನಾಡಿ, ‘ನೇತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಳಗಾವಿಯು ಬಹಳಷ್ಟು ಸುಧಾರಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲಿದೆ. ಕಣ್ಣಿನ ಪೊರೆ, ಕಾರ್ನಿಯಾ, ರೆಟಿನಾ, ಗ್ಲಾಕೊಮಾ, ಮೆಳ್ಳಗಣ್ಣಿನ ಸರ್ಜರಿ, ರೆಪ್ಪೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈನಂತಹ ಕಡೆಗಳಿಗೆ ರೋಗಿಗಳನ್ನು ಕಳುಹಿಸುವ ಸ್ಥಿತಿ ಈಗ ಇಲ್ಲ. ಶೇ 99ರಷ್ಟು ಚಿಕಿತ್ಸೆ ಇಲ್ಲಿಯೇ ಲಭ್ಯವಾಗುತ್ತಿದೆ. ಬೇರೆ ಕಡೆಗಳಲ್ಲಿ ತಜ್ಞ ವೈದ್ಯರು ಕೂಡ ಇಲ್ಲಿಗೆ ಬರುತ್ತಿದ್ದಾರೆ’ ಎಂದು ಹೇಳಿದರು.

‘ಬೆಳಗಾವಿ ವೈದ್ಯರಿಂದಲೇ 40ಕ್ಕೂ ಹೆಚ್ಚಿನ ಪ್ರಬಂಧಗಳು ಮಂಡನೆಯಾಗಲಿವೆ’ ಎಂದು ಡಾ.ಸಚಿನ್‌ ಮಾಹುಲಿ ತಿಳಿಸಿದರು.

ಡಾ.ಸಮೀರ್ ಬಾಗೇವಾಡಿ, ಡಾ.ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.