ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಧ್ಯಾನ ಕೇಂದ್ರದ ನೂತನ ಕಟ್ಟಡದ ಚೌಕಟ್ ಅಳವಡಿಸುವ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಚಾಲನೆ ನೀಡಿದರು. ರವಿಶಂಕರ ಗುರೂಜಿ, ರಾಜಯೋಗಿನಿ ಅಂಬಿಕಾ ಮುಖಂಡರು ಜತೆಯಾದರು
ಬೆಳಗಾವಿ: ‘ಮಹೋನ್ನತ ಧ್ಯೇಯ ಇನ್ನಿಟ್ಟುಕೊಂಡು ಆರಂಭವಾದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುಸಜ್ಜಿತ ಸಭಾಭವನ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ₹50 ಲಕ್ಷ ಅನುದಾನ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.
ಸಾಂಬ್ರಾ ಗ್ರಾಮದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಧ್ಯಾನ ಕೇಂದ್ರದ ನೂತನ ಕಟ್ಟಡದ ಚೌಕಟ್ ಅಳವಡಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಸೋಮವಾರ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ. ಶ್ರಾವಣ ಸೋಮವಾರದಂದೇ ಇಂಥ ಒಳ್ಳೆ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಸಾಂಬ್ರಾ ಜಾತ್ರೆಯ ಸಂದರ್ಭದಲ್ಲಿ ₹5 ಕೋಟಿ ಅನುದಾನ ಕೊಟ್ಟಿದ್ದೇನೆ. ನಗರದ ಮಾದರಿಯಲ್ಲಿ ಈ ಪ್ರದೇಶ ಇಂದು ಬೆಳೆದಿದೆ. ಏಳು ವರ್ಷಗಳ ಹಿಂದೆ ಗ್ರಾಮ ಹೇಗಿತ್ತು, ಇಂದು ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ’ ಎಂದು ಹೇಳಿದರು.
‘ನಾನು ರಾಜಕೀಯಕ್ಕೆ ಬಂದಾಗ ವಿರೋಧಿಸಿದವರೇ ಹೆಚ್ಚು. ಯಾರಾದರೂ ನನ್ನ ಆತ್ಮಗೌರವಕ್ಕೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ. ಕ್ಷೇತ್ರದ ಜನರೇ ಉತ್ತರಿಸುತ್ತಾರೆ. ರಾಜಕಾರಣಿಗಳನ್ನು ದೂರ ಇಡುವ ಹೊತ್ತಿನಲ್ಲಿ ಕ್ಷೇತ್ರದ ಜನರು ಮನೆಗೆ ಮಗಳು ಬಂದಳೆಂದು ಸೀರೆ ಕೊಟ್ಟು ಗೌರವಿಸುತ್ತಿದ್ದಾರೆ’ ಎಂದೂ ಹೇಳಿದರು.
ರವಿಶಂಕರ ಗುರೂಜಿ, ರಾಜಯೋಗಿನಿ ಅಂಬಿಕಾ, ಮುಖಂಡರಾದ ಶಂಕರಗೌಡ ಪಾಟೀಲ, ಈರಪ್ಪ ಸುಳೇಭಾವಿ, ಸ್ನೇಹಲ್ ಪೂಜೇರಿ, ಸುರೇಶ ಪಾಟೀಲ, ರಚನಾ ಗಾವಡೆ, ಉಳವಪ್ಪ ಮಲ್ಲನ್ನವರ, ಬೃಹ್ಮಾಕುಮಾರಿ ಸುಲೋಚನಾ, ಬಸು ದೇಸಾಯಿ, ನಾಗೇಶ ದೇಸಾಯಿ, ಸುರೇಶ ಕಾಳೋಜಿ, ಮಹೇಂದ್ರ ಗೋಟೆ ಇತರರು ಇದ್ದರು.
ದೇವಾಲಯ ಕಟ್ಟಡದ ವಾಸ್ತು ಶಾಂತಿ
ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಶ್ರಾವಣ ಸೋಮವಾರ ಒಂದೇ ದಿನ ಐದು ದೇವಾಲಯಗಳ ಉದ್ಘಾಟನೆ, ಭೂಮಿಪೂಜೆಗಳಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಸಾವಗಾಂವ ರಸ್ತೆಯಲ್ಲಿರುವ ನೀಲಕಂಠೇಶ್ವರ ದೇವಾಲಯದ ಬಳಿ ಸೋಮವಾರ ನಡೆದ ಕಟ್ಟಡದ ವಾಸ್ತು ಶಾಂತಿ, ಕಳಸಾರೋಹಣ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
‘ಚುನಾವಣೆ ಬಂದಾಗಷ್ಟೆ ಬರುವವರು, ದೊಡ್ಡ ದೊಡ್ಡ ಮಾತುಗಳನ್ನಾಡಿ ಹೋಗುತ್ತಾರೆ. ನಾನು ಕೆಲಸ ಮಾಡುವವಳು, ಜನರ ಭಾವನೆಗೆ ಗೌರವ ಕೊಡುವವಳು’ ಎಂದರು.
ಮುಖಂಡರಾದ ಚಂದ್ರಶೇಖಸ ಶಿರಹಟ್ಟಿ, ಮಾರುತಿ ಪಾಟೀಲ, ಮಹಾದೇವ ಪೋದಾರ, ಸಿಳಕೆ ಸಾಬಾ ಅಪ್ಪಾಸಾಹೇಬ ಸಿಳತೆ, ಯುನೂಸ್ ಅಹ್ಮದ್, ಸೂರಜ್ ಪಾಟೀಲ, ಕುಲಗೂಡಸಾಬ್, ರಾಜೇಶ್ವರಿ ಶಿಳಕೆ, ಚಾಯಾ ಪಾಟೀಲ, ಮೋಹನ್ ಸುಂಬ್ರೆಕರ್, ಮಹಾದೇವ ನೂಲಿ, ಮರೀಗೌಡ ಪಾಟೀಲ ಇತರರು ಇದ್ದರು.
‘₹50 ಲಕ್ಷ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ ನಿರ್ಮಾಣ’
ಬೆಳಗಾವಿ: ‘ಜನರು ಕೊಟ್ಟ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಅಧಿಕಾರ ಇದ್ದಷ್ಟು ದಿನ, ಜೀವ ಇರುವಷ್ಟು ದಿನ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಕೊಂಡಸಕೊಪ್ಪ ಗ್ರಾಮದಲ್ಲಿ ₹50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಲ್ಮೇಶ್ವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಕಲ್ಮೇಶರ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಲಾಗುತ್ತಿದೆ. ಮುಂದಿನ ಶ್ರಾವಣದ ವೇಳೆಗೆ ದೇವಸ್ಥಾನದ ಉದ್ಘಾಟನೆ ಆಗಲಿ ಎಂಬುದೇ ನನ್ನ ಆಶಯ’ ಎಂದು ಹೇಳಿದರು.
‘ನಾನು ಯಾವತ್ತೂ ಜಾತಿ ಭೇದ ಮಾಡಿದವಳಲ್ಲ. ಎಲ್ಲ ಜಾತಿ ವರ್ಗದವರಿಗೂ ಅವರ ದೇವಸ್ಥಾನಗಳಿಗೆ ಹಣ ನೀಡಿದ್ದೇನೆ. ಒಂದೇ ಗ್ರಾಮದಲ್ಲಿ ಮೂರು ದೇವಸ್ಥಾನಗಳಿಗೆ ತಲಾ ₹1 ಕೋಟಿ ನೀಡಿದ್ದೇನೆ’ ಎಂದರು.
ಮುತ್ನಾಳದ ಶಿವಾನಂದ ಶಿವಾಚಾರ್ಯರು, ಬಡೇಕೊಳ್ಳಿಮಠದ ನಾಗೇಂದ್ರ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಣ ಪಾಟೀಲ, ಮಡಿವಾಳಪ್ಪ ಪಾಟೀಲ, ಅರ್ಜುನ್ ಪಾಟೀಲ, ಶ್ರೀಕಾಂತ್ ಪಾಟೀಲ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.