ADVERTISEMENT

ಹಿಂಸಾಚಾರ ಖಂಡಿಸಿ ಯಕ್ಸಂಬಾದಲ್ಲೂ ಬಂದ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:47 IST
Last Updated 6 ಜನವರಿ 2018, 6:47 IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿನ ಭೀಮಾ –ಕೋರೆಗಾಂವ್‌ನಲ್ಲಿ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ದಲಿತರ ಮೆಲೆ ಕಲ್ಲು ತೂರಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ತಾಲ್ಲೂಕಿನ ಯಕ್ಸಂಬಾ ಬಂದ್ ಯಶಸ್ವಿಯಾಯಿತು.

ಪ್ರತಿಭಟನಾಕಾರರು ಅಂಬೇಡ್ಕರ್‌ ನಗರದಿಂದ ಪ್ರಮುಖ ಮಾರ್ಗವಾಗಿ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಮೆರವಣಿಗೆ ಮೂಲಕ ಬಂದು ಮಹಾರಾಷ್ಟ್ರ ಸರ್ಕಾರ ವಿರುದ್ಧ ಮತ್ತು ಮನುವಾದಿಗಳ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಗೌತಮ್ ಶೇರಖಾನ್‌ ಮಾತನಾಡಿ, ‘ಭೀಮಾ –ಕೋರೆಗಾಂವ್‌ನಲ್ಲಿ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳ ಷಡ್ಯಂತ್ರದಿಂದ ಈ ಘಟನೆ ನಡೆದಿದ್ದು, ಘಟನೆಗೆ ಕಾರಣರಾದವರ ಮೆೇಲೆ ಮಹಾರಾಷ್ಟ್ರ ಉಗ್ರ ಕ್ರಮ ಕೈಗೊಳ್ಳಬೇಕು ಮತ್ತು ವಿಜಯಪುರ ದಲ್ಲಿನ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದವರನ್ನು ಗಲ್ಲಿಗೇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಶಿವರಾಜ ಚಿತಳೆ, ರಾಕೇಶ ಮಾಳಗೆ, ಬಾಹುಸಾಹೇಬ್‌ ಶಿಂಗೆ, ವಿದ್ಯಾಧರ ಚಿತಳೆ ಮತ್ತು ರಾಹುಲ್‌ ಮುಂತಾದವರು ಮಾತನಾಡಿ, ಮಹಾರಾಷ್ಟ್ರ ಸರ್ಕಾರ ವಿರುದ್ದ ಕಿಡಿಕಾರಿ ದಲಿತರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾರಾಯಣ ನಾಯಿಕ್ ಮತ್ತು ಪಿಎಸ್‌ಐ ಸಂಗಮೇಶ ದಿಡಗಿನಹಾಳ ಅವರಿಗೆ ಮನವಿ ಸಲ್ಲಿಸಿದರು.

ಬಂದ್‌ ಅಂಗವಾಗಿ ಅಂಗಡಿ ಮುಂಗ್ಗಟ್ಟುಗಳು, ಶಾಲಾ ಕಾಲೇಜುಗಳು, ಸಹಕಾರಿ ಸಂಘಗಳು, ಬ್ಯಾಂಕ್‌ಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಸದಲಗಾ ಪಟ್ಟಣದಲ್ಲಿಯೂ ಬಂದ್‌ ಆಚರಿಸಿ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.