ADVERTISEMENT

ಪೈಲ್ವಾನ್‌ ಪ್ರೇಮಾ ಪಟ್ಟಿಗೆ ಸಹನಾ ಚಿತ್‌

ರಾಯಣ್ಣನ ಜನ್ಮಭೂಮಿಯಲ್ಲಿ ಕುಸ್ತಿ ಸಂಭ್ರಮ

ಎಂ.ರವಿ
Published 14 ಜನವರಿ 2018, 9:27 IST
Last Updated 14 ಜನವರಿ 2018, 9:27 IST
ಮಹಿಳಾ ಸ್ಪರ್ಧಿಗಳ ಪೈಪೋಟಿಯ ಕ್ಷಣ
ಮಹಿಳಾ ಸ್ಪರ್ಧಿಗಳ ಪೈಪೋಟಿಯ ಕ್ಷಣ   

ಬೈಲಹೊಂಗಲ: ನೂರಾರು ಸಂಖ್ಯೆಯಲ್ಲಿ ಅಲ್ಲಿ ಜಮಾಯಿಸಿದ್ದ ಪ್ರೇಕ್ಷಕರಲ್ಲಿ ಸಂಭ್ರಮ ಮನೆಮಾಡಿತ್ತು. ಆ ಸಂತೋಷಕ್ಕೆ ಶಿಳ್ಳೆ ಹೊಡೆಯುವುದು, ಕೇಕೆ ಹಾಕುವುದು ನಡೆದಿತ್ತು. ಅಷ್ಟೇ ಏಕೆ ‘ಬಿಡಬ್ಯಾಡ ಒಗಿ ಕುಸ್ತಿ’ ಎಂದು ಪೈಲ್ವಾನರನ್ನು ಅಖಾಡದ ಸುತ್ತಲೂ ನೆರೆದಿದ್ದ ಪ್ರೇಕ್ಷರಕು ಹುರಿದುಂಬಿಸುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾಡಳಿತದಿಂದ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಪುರುಷರ ಹಾಗೂ ಮಹಿಳೆಯರ ಕುಸ್ತಿ ಸ್ಪರ್ಧೆಗಳ ವೇಳೆ ಕಂಡುಬಂದ ಚಿತ್ರಣವಿದು.

ನಾಲ್ಕು ಗಂಟೆಗೂ ಅಧಿಕ ಕಾಲ ನಡೆದ ಕುಸ್ತಿ ಸ್ಪರ್ಧೆಗಳಲ್ಲಿ ಪುರುಷರ 28 ಮತ್ತು ಮಹಿಳೆಯರ 4 ಜೋಡಿ ಪೈಪೋಟಿ ನಡೆಸಿದವು. ಪುಣೆ, ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ರಾಜ್ಯದ, ಹೊರರಾಜ್ಯದ ಕುಸ್ತಿ ಪಟುಗಳು ಬಂದಿದ್ದರು.

ADVERTISEMENT

ಪುರುಷರ ವಿಭಾಗದಲ್ಲಿ ಹರಿಯಾಣದ ಸೋನು ಜೊತೆ ಕೊಲ್ಹಾಪುರ ಸಂತೋಷ ಸುತಾರ, ಬೆಳಗಾವಿ ದರ್ಗಾ ಪೈಲ್ವಾನ ಬಸಪ್ಪ ಚಿಮ್ಮಡ ಜೊತೆ ಸಾಂಗ್ಲಿಯ ರಾಮದಾಸ ಪವಾರ, ಕಂಕಣವಾಡಿಯ ಪೈಲ್ವಾನ ಶಿವಯ್ಯ ಪೂಜೇರಿ ಜೊತೆ ಸಾಂಗ್ಲಿಯ ಪ್ರಶಾಂತ ಜಗತಾಪ,  ಜಮಖಂಡಿಯ ಸಂಗಮೇಶ ಬಿರಾದಾರ ಜೊತೆ ಇಂಚಲಕರಂಜಿಯ ಶ್ರೀಮಂತ ಭೋಸಲೆ ಪ್ರಾಬಲ್ಯ ಮೆರೆದರು.

ಮಹಿಳೆಯರ ವಿಭಾಗದಲ್ಲಿ ಗದಗನ ಪ್ರೇಮಾ ಹುಚ್ಚನ್ನವರ ಆಳ್ವಾಸ್‌ನ ಸಹನಾ ಮೇಲೂ, ಆಳ್ವಾಸನ ಲಕ್ಷ್ಮಿ ರೇಡೇಕರ ಮಹಾರಾಷ್ಟ್ರದ ಅಂಕಿತಾ ಪಾತ್ಲೇ ವಿರುದ್ಧ ಜಯ ಪಡೆದರು. ಗದಗದ ಸಹೀದಾ ಬಳಗಾರ ಕೊಲ್ಲಾಪುರದ ಶ್ವೇತಾ ಢಾಗೆ ಮೇಲೂ ಪ್ರಾಬಲ್ಯ ಸಾಧಿಸಿದರು.  ಸವದತ್ತಿಯ ಲಕ್ಷ್ಮಿ ಪಾಟೀಲ ಮತ್ತು ಹಳಿಯಾಳದ ಸುಜಾತಾ ಪಾಟೀಲ ಕುಸ್ತಿ ಸಮಬಲವಾಯಿತು.

ಕಲಗೌಡ ಕಲ್ಲೂರ, ಗಿರೆಪ್ಪ ಅವರಾಧಿ, ಮುದಕಪ್ಪ ದೊಡವಾಡ, ಕುಸ್ತಿ ತರಬೇತುದಾರ ನಾಗರಾಜ, ಹಣುಮಂತ ಪಾಟೀಲ, ಗ್ರಾಮ ಪಂಚಾಯ್ತಿ ಸದಸ್ಯರುಗಳು ನಿರ್ಣಾಯಕರಾಗಿದ್ದರು.

ಶಾಸಕ ಡಾ.ವಿಶ್ವನಾಥ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಪುರುಷರ ಮೊದಲ ಜೋಡಿ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿದರು.

ಯುವ ಸಬಲೀಕರಣ ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಡಿ. ರಂಗಯ್ಯ, ಸೈಕ್ಲಿಂಗ್ ಕೋಚ್‌ ಮರನೂರ, ಅಂತರರಾಷ್ಟ್ರೀಯ ಕುಸ್ತಿಪಟು ರತನಕುಮಾರ ಮಠಪತಿ, ಪೈಲ್ವಾನರಾಗಿದ್ದ ಮಡಿವಾಳಪ್ಪ ಹೋಟಿ, ಕಲಗೌಡ ನಾವಲಗಟ್ಟಿ, ನಂಜಪ್ಪ ಕಲ್ಲೂರ, ಶಿವಾನಂದ ಮೂಲಿಮನಿ, ಮಡಿವಾಳಪ್ಪ ಕಲ್ಲೂರ, ಗಿರಿಯಪ್ಪ ಅವರಾಧಿ, ಅಶೋಕ ಗದಗ, ಜಿಲ್ಲಾ ಪಂಚಾಯ್ತಿ ಸದಸ್ಯ ಅನಿಲ ಮ್ಯಾಕಲಮರಡಿ, ಸಿಪಿಐ ಸಂಗನಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಗೌಸಬಾಬ ಬುಡ್ಡೆಮುಲ್ಲಾ, ಸವದತ್ತಿ ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಸುಂಕದ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.