ADVERTISEMENT

9 ಮಂದಿಯಿಂದ ನಾಮಪತ್ರ ಸಲ್ಲಿಕೆ

ಗೋಕಾಕದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 14:33 IST
Last Updated 23 ಸೆಪ್ಟೆಂಬರ್ 2019, 14:33 IST

ಬೆಳಗಾವಿ/ ಅಥಣಿ: ಕಾಗವಾಡ ಮತ್ತು ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಒಟ್ಟು 9 ಮಂದಿ ಕಾಂಗ್ರೆಸ್ ಮುಖಂಡರು ನಾಮಪತ್ರ ಸಲ್ಲಿಸಿದ್ದಾರೆ. ಮೊದಲ ದಿನ, ಗೋಕಾಕ ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

ಕಾಗವಾಡ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಚಂದ್ರಕಾಂತ ಇಮ್ಮಡಿ, ರವೀಂದ್ರ ಗಾಣಿಗೇರ, ಬಾಬಾಸಾಬ ಶಿಂಧೆ, ಓಂಪ್ರಕಾಶ ಪಾಟೀಲ, ದಿಗ್ವಿಜಯ ಪವಾರ್ ದೇಸಾಯಿ, ಅಥಣಿ ಕ್ಷೇತ್ರದಿಂದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಸತ್ತೆಪ್ಪ ಬಾಗೆನ್ನವರ, ಶಿದ್ರಾಮಗೌಡ ಪಾಟೀಲ ಹಾಗೂ ಗಜಾನನ ಮಂಗಸೂಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಚುನಾವಣಾ ಅಧಿಕಾರಿಗಳಾದ ಜಿಲಾನಿ ಮೊಕಾಶಿ, ಗೋಪಾಲಕೃಷ್ಣ ಸಣ್ಣತಂಗಿ ನಾಮಪತ್ರಗಳನ್ನು ಸ್ವೀಕರಿಸಿದರು.

ADVERTISEMENT

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ‘ಪಕ್ಷ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಥಣಿ ತಾಲ್ಲೂಕು ನೆರೆತಯಿಂದ ತತ್ತರಿಸಿ ಹೋಗಿದೆ. ಸಂತ್ರಸ್ತರಿಗೆ ನೆರವು ಕಲ್ಪಿಸಿಕೊಡಲು ಪಕ್ಷ ಬದ್ಧವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಜನಪರ ಯೋಜನೆಗಳು ನಮಗೆ ನೆರವಾಗಲಿವೆ’ ಎಂದು ತಿಳಿಸಿದರು.

ಮುಖಂಡರಾದ ಅನಿಲ ಸುಣಧೋಳಿ, ಶಿವಾನಂದ ಗುಡ್ಡಾಪೂರ, ರಾವಸಾಬ ಐಹೊಳಿ ಇದ್ದರು.

ಕಾಂಗ್ರೆಸ್‌ನಲ್ಲಿ ಉತ್ಸಾಹ:

ಯಾವುದೇ ರಾಜಕೀಯ ಪಕ್ಷದಿಂದಲೂ ಅಧಿಕೃತ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಆದರೆ, ಕಾಗವಾಡ ಹಾಗೂ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್‌ನವರು ಸ್ಪರ್ಧೆಗೆ ಉತ್ಸಾಹ ತೋರಿರುವುದು ಕಂಡುಬಂದಿದೆ.

ಮೂರೂ ಕ್ಷೇತ್ರಗಳ ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಹೊರಬೀಳದೇ ಇರುವುದರಿಂದ, ಬಿಜೆಪಿಯು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.