ADVERTISEMENT

ಅರಣ್ಯದಲ್ಲಿ ವೃದ್ಧೆ ಬಿಟ್ಟು ಹೋದ ಸಂಬಂಧಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 18:56 IST
Last Updated 23 ಜನವರಿ 2023, 18:56 IST
ಖಾನಾಪುರ ತಾಲ್ಲೂಕಿನ ನಾವಗಾ ಅರಣ್ಯದಲ್ಲಿ ಸೋಮವಾರ ಪತ್ತೆಯಾದ ವೃದ್ಧೆಯನ್ನು ಗ್ರಾಮಸ್ಥರು ತಂದು ರಸ್ತೆ ಪಕ್ಕದ ಹೊಲವೊಂದರ ಬಣವೆ ಬಳಿ ಮಲಗಿಸಿದ್ದರು
ಖಾನಾಪುರ ತಾಲ್ಲೂಕಿನ ನಾವಗಾ ಅರಣ್ಯದಲ್ಲಿ ಸೋಮವಾರ ಪತ್ತೆಯಾದ ವೃದ್ಧೆಯನ್ನು ಗ್ರಾಮಸ್ಥರು ತಂದು ರಸ್ತೆ ಪಕ್ಕದ ಹೊಲವೊಂದರ ಬಣವೆ ಬಳಿ ಮಲಗಿಸಿದ್ದರು   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣಗೊಂಡ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ. ‘ಕುಟುಂಬದವರೇ ಅವರನ್ನು ಅರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರುಮೇವಾಡಿ ಗ್ರಾಮದ ರೈತ ರಾಜು ಘಾಡಿ ಸೋಮವಾರ ಕಾಡಿನ ದಾರಿಯಲ್ಲಿ ಹೊರಟಿದ್ದರು. ಆಗ ವೃದ್ಧೆ ನರಳುವುದು ಕೇಳಿಸಿತು. ಹತ್ತಿರ ಹೋಗಿ ನೋಡಿದ ಅವರು ವೃದ್ಧೆಗೆ ನೀರು ಕುಡಿಸಿ ಉಪಚರಿಸಿದರು. ತಮ್ಮ ಟ್ರ್ಯಾಕ್ಟರ್‌ನಲ್ಲಿ ಅವರನ್ನು ಹತ್ತಿರದ ಧಾಬಾಗೆ ಕರೆತಂದರು. ಧಾಬಾ ಮಾಲೀಕ ಅನಂತ ಜುಂಜವಾಡಕರ, ಉದಯ ಕೋಳೇಕರ ಅವರು ಆಂಬುಲೆನ್ಸ್‌ ಕರೆಸಿ, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು.

ಒಳರೋಗಿಯಾಗಿ ದಾಖಲಿಸಿ ಕೊಂಡ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ವೃದ್ಧೆ ನಾಲ್ಕು– ಐದು ದಿನಗಳಿಂದ ಏನನ್ನೂ ತಿಂದಿಲ್ಲ, ನೀರೂ ಕುಡಿದಿಲ್ಲ. ‘ತೀವ್ರ ನಿತ್ರಾಣಗೊಂಡ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ತಾನು ಮುಧೋಳದವಳು ಎಂದಷ್ಟೇ ಹೇಳಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ತಿಳಿಸಿದರು.

ADVERTISEMENT

ವೃದ್ಧೆ ಪತ್ತೆಯಾದ ಸ್ಥಳವು ಗ್ರಾಮದಿಂದ 4 ಕಿ.ಮೀ ದೂರದಲ್ಲಿದೆ. ದಟ್ಟ ಅರಣ್ಯವಾದ್ದರಿಂದ ಜನ ಅತ್ತ ಸುಳಿ ದಾಡುವುದಿಲ್ಲ. ಮೈ ಕೊರೆಯುವ ಚಳಿ ಯಲ್ಲೇ ವೃದ್ಧೆ ನಲುಗಿದ್ದಾರೆ. ಇರುವೆ ಇತರ ಕ್ರಿಮಿಕೀಟಗಳು ಅವರನ್ನು ಕಚ್ಚಿದ್ದು ಗಾಯಗಳಾಗಿವೆ. ಯಾವುದೇ ವನ್ಯಪ್ರಾಣಿ ದಾಳಿ ಮಾಡಿದ ಗುರುತು ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವೃದ್ಧೆಯನ್ನು ಬಿಟ್ಟುಹೋದ ಸ್ಥಳದಲ್ಲಿ ಅವರ ಬಟ್ಟೆ, ₹3,000 ಹಣ ಮಾತ್ರ ಸಿಕ್ಕಿದೆ. ಗುರುತಿನ ಚೀಟಿ, ವಿಳಾಸ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.