ಚನ್ನಮ್ಮನ ಕಿತ್ತೂರು: ಇಲ್ಲಿಯ ಚನ್ನಾಪುರ ಗ್ರಾಮದಲ್ಲಿಯ ಗ್ಯಾರೇಜ್ ಮತ್ತು ಆಟೊಮೊಬೈಲ್ ಅಂಗಡಿ ಕಳವು ಮಾಡಲು ಬಂದಿದ್ದ ಮೂವರು ಕಳ್ಳರಲ್ಲಿ ಒಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯ ಆನಂದ ನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಆರೋಪಿ. ಈತನ ಜತೆಗೆ ಬಂದಿದ್ದ ಹಳೇ ಹುಬ್ಬಳ್ಳಿಯವರೇ ಆದ ಇರ್ಪಾನ್ ಅಬ್ದುಲ್ ಬೊದಲೇಖಾನ್ ಹಾಗೂ ಕೃಷ್ಣಾಪುರ ಗಲ್ಲಿಯ ಮಹ್ಮದಹುಸೇನ್ ಅಬ್ದುಲಸಾಬ್ ನರಗುಂದ ಪರಾರಿಯಾಗಿದ್ದಾರೆ.
‘ಪಟ್ಟಣದ ರಹವಾಸಿ ಸಮೀವುಲ್ಲಾ ಅಬ್ದುಲಮುನಾಫ್ ಶೀಗನಳ್ಳಿ ಅವರಿಗೆ ಸೇರಿದ ಅಂಗಡಿಯ ಶೆಟರ್ ಬೀಗ ಮುರಿಯಲು ಯತ್ನಿಸಿದ್ದಾರೆ. ಮುರಿಯದಿದ್ದಾಗ ತಗಡಿನ ಚಾವಣಿ ಮೇಲೇರಿ ಒಳ ನುಗ್ಗಲು ಯತ್ನಿಸಿದ್ದಾರೆ. ತಗಡಿನ ಮೇಲೆ ಸಪ್ಪಳವಾಗಿದ್ದರಿಂದ ಆ ಭಾಗದ ಜನರು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ಕೆಳಗಿದ್ದ ಕಳ್ಳರಿಬ್ಬರು ಓಡಿ ಹೋಗಿದ್ದಾರೆ. ಚಾವಣಿ ಏರಿದ್ದ ಕಳ್ಳ ಜಿಗಿಯಲು ಹೋಗಿ ಕಾಲಿಗೆ ಪೆಟ್ಟು ಆಗಿದ್ದರಿಂದ ಜನರ ಕೈಗೆ ಸಿಕ್ಕಿ ಬಿದ್ದನು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕಾಲಿಗೆ ಪೆಟ್ಟು ತಗುಲಿಸಿಕೊಂಡಿರುವ ಫಾರೂಕ್ ಇಸ್ಮಾಯಿಲ್ ಹುಯಿಲಗೋಳನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಡಿ ಹೋಗಿರುವ ಕಳ್ಳರಿಬ್ಬರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.