ADVERTISEMENT

ಮಣ್ಣೂರ: ಪಾಳುಬಿದ್ದ ಸಿಟಿಇ ಕಟ್ಟಡ

ಕಾಮಗಾರಿ ಪೂರ್ಣಗೊಳಿಸಿ, ವಸತಿ ಶಾಲೆ ಅಥವಾ ಸರ್ಕಾರಿ ಪ್ರೌಢಶಾಲೆ ತೆರೆಯಲು ಆಗ್ರಹ

ಇಮಾಮ್‌ಹುಸೇನ್‌ ಗೂಡುನವರ
Published 30 ಜುಲೈ 2025, 1:58 IST
Last Updated 30 ಜುಲೈ 2025, 1:58 IST
ಬೆಳಗಾವಿ ತಾಲ್ಲೂಕಿನ ಮಣ್ಣೂರಿನಲ್ಲಿ ನಿರ್ಮಿಸಿದ ಸಿಟಿಇ ಕಟ್ಟಡ ಬಳಕೆಯಾಗದೆ ಪಾಳು ಬಿದ್ದಿರುವುದು   ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಮಣ್ಣೂರಿನಲ್ಲಿ ನಿರ್ಮಿಸಿದ ಸಿಟಿಇ ಕಟ್ಟಡ ಬಳಕೆಯಾಗದೆ ಪಾಳು ಬಿದ್ದಿರುವುದು   ಪ್ರಜಾವಾಣಿ ಚಿತ್ರ   

ಬೆಳಗಾವಿ: ತಾಲ್ಲೂಕಿನ ಮಣ್ಣೂರಿನಲ್ಲಿ ಒಂದೇ ಕಡೆ ಡಿ.ಇಡಿ, ಬಿ.ಇಡಿ ಕೋರ್ಸ್‌ಗಳನ್ನು ನಡೆಸುವ ಉದ್ದೇಶದಿಂದ ರಾಜ್ಯ ಸರ್ಕಾರ 10 ಎಕರೆ ಜಾಗ ನೀಡಿತ್ತು. ಈ ಪೈಕಿ ಐದು ಎಕರೆಯಲ್ಲಿ ತಲೆ ಎತ್ತಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಕಟ್ಟಡ ಬಳಕೆಯಾಗುತ್ತಿದೆ. ಉಳಿದ ಐದು ಎಕರೆಯಲ್ಲಿ ನಿರ್ಮಾಣವಾದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ (ಸಿಟಿಇ) ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದಿವೆ.

ಕೆಲ ಕಟ್ಟಡ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲೇ ಇವೆ. ಸಂಜೆಯಾಗುತ್ತಲೇ ಕಟ್ಟಡದೊಳಗೆ ಪ್ರವೇಶಿಸುತ್ತಿರುವ ಕಿಡಿಗೇಡಿಗಳು ಅಕ್ರಮ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್‌, ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಳಕೆಯಾಗದ ಕಟ್ಟಡಗಳನ್ನು ದುರಸ್ತಿಗೊಳಿಸಿ ಮತ್ತು ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ಇಲ್ಲಿ ಸರ್ಕಾರಿ  ವಸತಿ ಶಾಲೆ, ಪ್ರೌಢಶಾಲೆ ಅಥವಾ ಬಿಇಡಿ ಕಾಲೇಜು ತೆರೆಯಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ADVERTISEMENT

ಸಿಟಿಇ ಸ್ಥಳಾಂತರವಾಗಲಿಲ್ಲ: ಹಿಂದೆ ಡಯಟ್‌ ಬೆಳಗಾವಿ ನಗರದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ನೂರಾರು ವಿದ್ಯಾರ್ಥಿಗಳು ಅಲ್ಲಿಯೇ ಡಿ.ಇಡಿ ಕಲಿಯುತ್ತಿದ್ದರು. ಮಣ್ಣೂರಿನಲ್ಲಿ ಹೊಸ ಕಟ್ಟಡ ನಿರ್ಮಾಣವಾದ ನಂತರ 1994–95ರಲ್ಲಿ ಸ್ಥಳಾಂತರವಾಯಿತು. ಈಗ ಸುಸಜ್ಜಿತ ಕಟ್ಟಡ ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ ಅದಕ್ಕೆ ಆವರಣ ಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. 

ಆದರೆ, ಬಿ.ಇಡಿ ಕೋರ್ಸ್‌ ನಡೆಸುತ್ತಿರುವ ಸಿಟಿಇ ಸ್ಥಳಾಂತರವಾಗದೆ ಕಾಕತಿವೇಸ್‌ ರಸ್ತೆಯಲ್ಲಿನ ಹಳೇ ಕಟ್ಟಡದಲ್ಲೇ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಸೋರುವ ಕಾರಣ, ಕಲಿಕಾ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ.

‘ಸದ್ಯ ಇರುವ ಕಾಲೇಜಿನಲ್ಲಿ ಪ್ರತಿವರ್ಷ 100 ವಿದ್ಯಾರ್ಥಿಗಳಿಗೆ ಬಿಇಡಿ ‍‍ಕೋರ್ಸ್‌ನ ಪ್ರಥಮ ವರ್ಷಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ. ಈಗ ಬಿಇಡಿ ಕೋರ್ಸ್‌ಗೆ ಬೇಡಿಕೆ ಹೆಚ್ಚಿದೆ. ಆದರೆ, ಹೆಚ್ಚಿನವರು ಪ್ರವೇಶ ಸಿಗದೆ ಪರದಾಡುತ್ತಿದ್ದಾರೆ. ಹಾಗಾಗಿ ಈಗ ಇರುವ ಕಾಲೇಜಿನೊಂದಿಗೆ, ಮಣ್ಣೂರಿನಲ್ಲಿ ಪಾಳುಬಿದ್ದ ಕಟ್ಟಡಗಳಲ್ಲೂ ಬಿಇಡಿ ಕೋರ್ಸ್‌ ಆರಂಭಿಸಿದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಶಿಕ್ಷಣ ತಜ್ಞರು.

‘ಮಣ್ಣೂರ ಗ್ರಾಮವು ಬೆಳಗಾವಿ ನಗರದ ಸಮೀಪದಲ್ಲೇ ಇದೆ. ಹಾಗಾಗಿ ಬಳಕೆಯಾಗದ ಕಟ್ಟಡಗಳಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಅಥವಾ ಯಾವುದಾದರೂ ವಸತಿ ಶಾಲೆ ತೆರೆದರೆ, ಗ್ರಾಮೀಣ ಭಾಗದ ಮಕ್ಕಳಿಗೆ ಸಹಾಯವಾಗುತ್ತದೆ’ ಎಂಬ ಮಾತು ಕೇಳಿಬರುತ್ತಿದೆ.

ಬೆಳಗಾವಿ ತಾಲ್ಲೂಕಿನ ಮಣ್ಣೂರಿನಲ್ಲಿ ಸಿಟಿಇ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಅರ್ಧಕ್ಕೆ ನಿಂತಿರುವುದು ಪ್ರಜಾವಾಣಿ ಚಿತ್ರ
ಡಯಟ್‌ ಕಟ್ಟಡ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಸಿಟಿಇಗೆ ಸೇರಿದ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಕೈಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
ಬಸವರಾಜ ನಾಲತವಾಡ ಡಯಟ್‌ ಪ್ರಾಚಾರ್ಯ
ಮಣ್ಣೂರಿನಲ್ಲಿ ಕಟ್ಟಡ ಕಾಮಗಾರಿ ಪೂರ್ಣವಾಗದ್ದರಿಂದ ಸಿಟಿಇ ಸ್ಥಳಾಂತರವಾಗಿರಲಿಲ್ಲ. ಅದನ್ನು ಪೂರ್ಣಗೊಳಿಸಿ ಸರ್ಕಾರಿ ಪ್ರೌಢಶಾಲೆ ಅಥವಾ ವಸತಿ ಶಾಲೆ ತೆರೆಯಬೇಕು
ಎಂ.ಎಂ.ಸಿಂಧೂರ ಸಿಟಿಇ ನಿವೃತ್ತ ಪ್ರಾಚಾರ್ಯ

ಸಿಟಿಇ ಸ್ಥಳಾಂತರ ಕಷ್ಟ  ‘ಈಗ ಸಿಟಿಇಯಲ್ಲಿ 200 ವಿದ್ಯಾರ್ಥಿಗಳು ಬಿಇಡಿ ಓದುತ್ತಿದ್ದಾರೆ. ಈ ಪೈಕಿ ಶೇ 90ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಕಾಲೇಜಿನ ಬಳಿಯೇ ಅವರಿಗೆ ವಸತಿ ನಿಲಯವೂ ಇದೆ. ಬೆಳಗಾವಿಯಿಂದ ಮಣ್ಣೂರಿಗೆ ಸಮರ್ಪಕ ಬಸ್‌ ಸೌಕರ್ಯವಿಲ್ಲ. ಹಾಗಾಗಿ ಅಲ್ಲಿಗೆ ಇದನ್ನು ಸ್ಥಳಾಂತರಿಸುವುದು ಕಷ್ಟ. ಇನ್ನೂ ಒಂದೇ ಊರಿನಲ್ಲಿ ಎರಡು ಸಿಟಿಇ ಆರಂಭಿಸಲು ಸಾಧ್ಯವಿಲ್ಲ. ಹಾಗಾಗಿ ಅಲ್ಲಿನ ಕಟ್ಟಡದಲ್ಲಿ ಬೇರೆ ಕೋರ್ಸ್‌ ಆರಂಭಿಸಬಹುದು’ ಎಂದು ಪ್ರಾಚಾರ್ಯ ಎನ್.ಶ್ರೀಕಂಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.