ADVERTISEMENT

ಸಿಎಂ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ: ABVP ಕಾರ್ಯಕರ್ತರು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 11:26 IST
Last Updated 29 ಏಪ್ರಿಲ್ 2025, 11:26 IST
   

ಬೆಳಗಾವಿ: ಇಲ್ಲಿ ನಡೆದ ಕಾಂಗ್ರೆಸ್‌ನ ಪ್ರತಿಭಟನಾ ಸಮಾವೇಶದಲ್ಲಿ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ, ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 

ಎಬಿವಿಪಿ ಮಹಾನಗರ ಘಟಕದ ‍ನೇತೃತ್ವದಲ್ಲಿ ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಸಿದ್ದರಾಮಯ್ಯ ಭಾವಚಿತ್ರ ಇರುವ ಪೋಸ್ಟರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಿ.ಸಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಸಂಚಾರ ತಡೆಯುವ ಜತೆಗೆ, ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದಾಗ ಪರಸ್ಪರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು

ADVERTISEMENT

‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮೇಲೆಯೇ ಮುಖ್ಯಮಂತ್ರಿ ದರ್ಪ ತೋರಿದ್ದು ನಾಚಿಕೆಗೇಡಿನ ಸಂಗತಿ. ಸರ್ಕಾರಿ ಅಧಿಕಾರಿಗಳು ಮುಖ್ಯಮಂತ್ರಿಯ ಗುಲಾಮರಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಸರ್ವಾಧಿಕಾರಿ ಸರ್ಕಾರವೂ ಅಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ನೀವೇ ಗೂಂಡಾಗರಿಗೆ ಮುಂದಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಕಾರ್ಯಕರ್ತರು ಎಚ್ಚರಿಕೆ ಕೊಟ್ಟರು. 

ಎಬಿವಿಪಿ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸಚಿನ ಹಿರೇಮಠ, ಯಲ್ಲಪ್ಪ ಬೊಮ್ಮನಹಳ್ಳಿ, ಪಣಿರಾಘವೇಂದ್ರ ದೇಸಾಯಿ, ಕುಶಾಲ ಘೋಡಗೇರಿ, ಪ್ರಜ್ವಲ ತಪಸಿ, ಪ್ರಥಮಗೌಡ ಪಾಟೀಲ ಇತರರಿದ್ದರು.

ರೈತರಿಂದಲೂ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ರೈತ ಸಂಘಟನೆಯ ಮುಖಂಡರು ಪ್ರತಿಭಟಿಸಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಪೊಲೀಸ್‌ ಅಧಿಕಾರಿ ಹೊಡೆಯಲು ಮುಂದಾಗಿದ್ದು ಸರಿಯಲ್ಲ’ ಎಂದು ದೂರಿದರು.

ಸಿ.ಎಂ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಸಿದ್ದರಾಮಯ್ಯ ಭ್ರಷ್ಟ ಮುಖ್ಯಮಂತ್ರಿ. ದೇಶದ್ರೋಹಿ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ಮುಖಂಡರಾದ ಪ್ರಕಾಶ ನಾಯ್ಕ, ರಾಘವೇಂದ್ರ ನಾಯ್ಕ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.