ADVERTISEMENT

‘ಗ್ರಾಮ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:02 IST
Last Updated 30 ಏಪ್ರಿಲ್ 2021, 13:02 IST

ಬೆಳಗಾವಿ: ‘ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಕ್ರಮಗಳ ಪಾಲನೆಗೆ ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ತಿಳಿಸಿದ್ದಾರೆ.

‘ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯು ಜವಾಬ್ದಾರಿಗಳನ್ನು ನಿರ್ವಹಿಸಬೇಕು. ನಗರ ಪ್ರದೇಶಗಳಿಂದ ಹಿಂದಿರುಗುವ ವಲಸೆ ಕಾರ್ಮಿಕರು, ಮಹಿಳಾ ಕಾರ್ಮಿಕರು ತ್ತು ದುರ್ಬಲ ವರ್ಗದವರಿಗೆ, ಊಟ, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ವಿಶೇಷವಾಗಿ ನಿರ್ಗತಿಕರು, ಅಂಗವಿಕಲರು, ಹಿರಿಯ ನಾಗರಿಕರು, ಮಾಜಿ ದೇವದಾಸಿಯರು, ತೃತೀಯ ಲಿಂಗಿಗಳು ಹಾಗೂ ಮಹಿಳೆಯರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೇ, ಕೋವಿಡ್‌-19 ಪ್ರಕರಣಗಳಲ್ಲಿ ಅರ್ಹ ವ್ಯಕ್ತಿಗಳಿಗೆ ನೀಡುವ ಲಸಿಕಾಕರಣದ ಕಾರ್ಯವನ್ನು ವೃದ್ಧಿಸಲು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಲಸಿಕಾಕರಣದ 2ನೇ ಡೋಸ್‌ ನೀಡಿದ ನಂತರ ಪ್ರಮಾಣಪತ್ರವನ್ನು ಸಂಬಂಧಿಸಿದವರಿಗೆ ನೀಡಬೇಕು’ ಎಂದು ಸೂಚಿಸಿದ್ದಾರೆ.

‘ಕೊರೊನಾ ತಡೆಗಟ್ಟುವಿಕೆಯಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಕರನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಿ, ಹಗಲು-ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ಅವರು ಸೇವೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯ್ತಿ ಸಮುದಾಯ ಸಹಾಯವಾಣಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ, ಗ್ರಾಮ ಪಂಚಾಯ್ತಿಗಳು ಅವಶ್ಯ ಮಾಸ್ಕ್‌ಗಳು, ಸಾಬೂನುಗಳು ಮತ್ತು ಸ್ಯಾನಿಟೈಸರ್‌ ಇತ್ಯಾದಿ ಸ್ವಚ್ಛತಾ ಪರಿಕರಗಳು, ಊಟ ಇತ್ಯಾದಿಗಾಗಿ 14ನೇ ಹಣಕಾಸು ಆಯೋಗದ ಉಳಿಕೆ ಆನುದಾನ, 15ನೇ ಹಣಕಾಸು ಆಯೋಗದ ಅನುದಾನ ಆಥವಾ ಸ್ವಂತ ಸಂಪನ್ಮೂಲ ಉಪಯೋಗಿಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.