ADVERTISEMENT

ತರಗತಿಗೆ ಗೈರಾಗುವವರ ವಿರುದ್ಧ ಕ್ರಮ: ನಾಗೇಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 16:54 IST
Last Updated 17 ಸೆಪ್ಟೆಂಬರ್ 2022, 16:54 IST
ಬಿ ಸಿ ನಾಗೇಶ
ಬಿ ಸಿ ನಾಗೇಶ   

ಬೆಳಗಾವಿ: ‘ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ತಮ್ಮ ಕೆಲಸದ ಅವಧಿಯಲ್ಲಿ ತರಗತಿಗೆ ಗೈರಾಗಿ, ಖಾಸಗಿ ಕಾರ್ಯಕ್ರಮಕ್ಕೆ ಹಾಜರಾದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಬಹುತೇಕ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಯಾಗಿದೆ. ಶಿಕ್ಷಕರ ಹಾಜರಾತಿ ಕುರಿತಾಗಿ ನಿಗಾ ವಹಿಸಲಾಗುತ್ತಿದೆ. ಆದರೂ, ಕುಗ್ರಾಮ, ಬೆಟ್ಟ ಹಾಗೂ ತೋಟಪಟ್ಟಿಗಳಲ್ಲಿ ಇರುವ ಶಾಲೆಗಳಲ್ಲಿ ಶಿಕ್ಷಕರು ನಿಯಮಾನುಸಾರ ತರಗತಿಗೆ ಹಾಜರಾಗುತ್ತಿಲ್ಲ ಎಂಬ ದೂರು ಬರುತ್ತಿವೆ. ಶಿಕ್ಷಕರು ಇದನ್ನೇ ಮುಂದುವರಿಸಬಾರದು. ಶಾಲೆಗೆ ಬರಲು ಬಸ್ ಸೌಕರ್ಯದ ಕೊರತೆ ನೆಪ ಹೇಳಬಾರದು’ ಎಂದರು.

ಖಾನಾಪುರ ತಾಲ್ಲೂಕಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಮರಾಠಿ ಮಾಧ್ಯಮ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವನ್ನು ನಾಗೇಶ ಅಲ್ಲಗಳೆದರು. ‘ಮರಾಠಿ ಭಾಷಿಗರು ಕನ್ನಡ ಅಥವಾ ಆಂಗ್ಲ ಮಾಧ್ಯಮ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.