ಬೆಳಗಾವಿ: ‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ತಡೆಗಟ್ಟುವ ಅವಶ್ಯಕತೆ ಇದೆ. ಸುರಕ್ಷಿತವಾಗಿ ಆನ್‌ಲೈನ್ ಸೇವೆ ಹೊಂದುವ ಕುರಿತಾಗಿಯೂ ಅರಿವು ಮೂಡಿಸಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸೈಬರ್ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷಿತರು ಸೇರಿದಂತೆ ಎಲ್ಲ ವರ್ಗಗಳ ಜನರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಬೇಕಿದೆ. ಅಂತರ್ಜಾಲ ಬಳಸುವಾಗ ಪ್ರತಿಯೊಬ್ಬರೂ ಜಾಗೂರಕರಾಗಿ ಇರಬೇಕಿದೆ’ ಎಂದರು.
ಸೈಬರ್ ಕ್ರೈಂ ವಿಭಾಗದ ಎಸಿಪಿ ಜೆ.ರಘು, ‘ಇಂದು ಹೆಚ್ಚಿನವರು ಒಂದಿಲ್ಲೊಂದು ರೀತಿಯಲ್ಲಿ ಸೈಬರ್ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಹಣಕಾಸು ವಂಚನೆ, ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಅಪರಾಧಗಳು ಆನ್‌ಲೈನ್ ಜಗತ್ತಿನಲ್ಲೇ ನಡೆಯುತ್ತಿವೆ. ಹಾಗಾಗಿ ಯಾರೂ ಯಾವ ಕಾರಣಕ್ಕೂ ತಮ್ಮ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರಿಗೆ ಹಂಚಿಕೊಳ್ಳಬಾರದು’ ಎಂದು ತಿಳಿಸಿದರು.
‘ಸೈಬರ್ ವಂಚಕರು ವಾಟ್ಸ್‌ಆ್ಯಪ್, ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಸಂವಹನ ನಡೆಸುತ್ತಾರೆ. ಈ ಕುರಿತು ಜಾಗೃತರಾಗಿರಬೇಕು. ಯಾವುದೇ ಬ್ಯಾಂಕ್, ಕಂಪನಿ ಹೆಸರು ಹೇಳಿ ಮಾಹಿತಿ ಕೇಳುವವರಿಂದ ಎಚ್ಚರ ವಹಿಸಬೇಕು. ಸೈಬರ್ ವಂಚನೆಗೆ ಒಳಗಾದ ಸಂದರ್ಭ ತಕ್ಷಣವೇ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಬೇಕು. ಅಪರಿಚಿತ ಲಿಂಕ್, ನಕಲಿ ಪ್ರೊಫೈಲ್ ಬಗ್ಗೆ ಎಚ್ಚರ ವಹಿಸಬೇಕು. ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಅಂಥ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.
ಬೆಳಗಾವಿ ನಗರ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ, ಎನ್‌ಐಸಿ ಜಿಲ್ಲಾ ಸಂಯೋಜಕ ಶಿರೀಷ್ ಖಡಗದಕೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.