ADVERTISEMENT

ಬಡವರಿಗೆ ಸಲಹೆ: ಯುವ ವಕೀಲರಿಗೆ ಸಲಹೆ

ಕೆಎಲ್ಎಸ್ ಕಾನೂನು ಕಾಲೇಜಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 14:27 IST
Last Updated 7 ಅಕ್ಟೋಬರ್ 2021, 14:27 IST
ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಪ್ರಥಮ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ‘ಸಂವಿಧಾನಿಕ ಕಾನೂನು’ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೃಷ್ಣ ಬಾಂದೋಕರ್ ಅವರಿಗೆ ಎಂ.ಕೆ. ನಂಬಿಯಾರ್ ಸ್ವರ್ಣ ಪದಕವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ನಾರಾಯಣ ಭಟ್ ಗುರುವಾರ ಪ್ರದಾನ ಮಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಗಣಾಚಾರಿ, ಪ್ರಾಂಶುಪಾಲ ಡಾ.ಎ.ಎಚ್. ಹವಾಲ್ದಾರ ಮತ್ತು ಸೊಸೈಟಿಯ ಕಾರ್ಯದರ್ಶಿ ವಿವೇಕ ಕುಲಕರ್ಣಿ ಇದ್ದಾರೆ
ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಪ್ರಥಮ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ‘ಸಂವಿಧಾನಿಕ ಕಾನೂನು’ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೃಷ್ಣ ಬಾಂದೋಕರ್ ಅವರಿಗೆ ಎಂ.ಕೆ. ನಂಬಿಯಾರ್ ಸ್ವರ್ಣ ಪದಕವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ನಾರಾಯಣ ಭಟ್ ಗುರುವಾರ ಪ್ರದಾನ ಮಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಗಣಾಚಾರಿ, ಪ್ರಾಂಶುಪಾಲ ಡಾ.ಎ.ಎಚ್. ಹವಾಲ್ದಾರ ಮತ್ತು ಸೊಸೈಟಿಯ ಕಾರ್ಯದರ್ಶಿ ವಿವೇಕ ಕುಲಕರ್ಣಿ ಇದ್ದಾರೆ   

ಬೆಳಗಾವಿ: ‘ಬಡವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವುದು ಯುವ ವಕೀಲರ ಆದ್ಯತೆಯಾಗಬೇಕು. ಇದು ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶಮಂಜುನಾಥ ನಾರಾಯಣ ಭಟ್ ಹೇಳಿದರು.

ನಗರದ ಕರ್ನಾಟಕ ಲಾ ಸೊಸೈಟಿ(ಕೆಎಲ್‌ಎಸ್)ಯ ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯದ ದತ್ತಿ ಪ್ರಶಸ್ತಿ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಣ ಗಳಿಸುವುದೆ ವಕೀಲರ ಆದ್ಯತೆ ಆಗಬೇಕಾಗಿಲ್ಲ. ಸಮಾಜಕ್ಕೆ ಒಳ್ಳೆಯ ವಕೀಲರು ಹಾಗೂ ನ್ಯಾಯಾಧೀಶರ ಅಗತ್ಯವಿದೆ. ಅದನ್ನು ಪೂರೈಸುವತ್ತ ವಕೀಲರ ಚಿತ್ತ ಇರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅನೇಕ ಯುವ ವಕೀಲರು ಕೇವಲ ಒಬ್ಬ ಹಿರಿಯರ ಶಿಶಿಕ್ಷುವಾಗಿ ಕೆಲಸ ಮಾಡುತ್ತಿರುತ್ತಾರೆ. ಕೇವಲ ಒಬ್ಬ ವಕೀಲರು ಆದರ್ಶ ಆಗಿರಬಾರದು. ಅವರು ವಕೀಲರ ಸಂಘದ ಎಲ್ಲಾ ಸದಸ್ಯರಿಂದಲೂ ಪಾಠ ಕಲಿಯುವ ಅವಕಾಶಗಳು ಇರುತ್ತವೆ. ಅವುಗಳನ್ನು ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.

ಗಮನಿಸಬೇಕು: ‘ನ್ಯಾಯಾಲಯ ಕಲಾಪದಲ್ಲಿ ಕುಳಿತು ಪ್ರತಿ ವಕೀಲರ ವಾದ-ವಿವಾದ, ಪಾಟಿ ಸವಾಲುಗಳನ್ನು ಗಮನಿಸಬೇಕು. ಅವುಗಳನ್ನು ತಮ್ಮ ಕಲಿಕೆಯ ಅವಕಾಶಗಳು ಎಂದು ತಿಳಿಯಬೇಕು. ಕಾಲೇಜಿನಲ್ಲಿ ತಪ್ಪುಗಳನ್ನು ತಿದ್ದಲು ಉಪನ್ಯಾಸಕರು ಇರುತ್ತಾರೆ. ಆದರೆ, ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಆರಂಭಿಸಿದಾಗ ತಪ್ಪುಗಳನ್ನು ತಿದ್ದಲು ಯಾರೂ ಇರುವುದಿಲ್ಲ. ಹಿರಿಯ ವಕೀಲರನ್ನು ನೋಡಿ ಕಲಿಯಬೇಕು. ವಕೀಲರ ಸಣ್ಣ ತಪ್ಪು ಕಕ್ಷಿದಾರನಿಗೆ, ಅವರ ಕುಟುಂಬಕ್ಕೆ, ಅವರ ಇಡೀ ತಲೆಮಾರಿಗೆ ತೊಂದರೆ ಕೊಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.

ಸೊಸೈಟಿಯ ಕಾರ್ಯದರ್ಶಿ ವಿವೇಕ ಕುಲಕರ್ಣಿ, ‘ವಕೀಲರು ಕಾರ್ಯ ಕೌಶಲ ಕಲಿತ ನಂತರ ಯಶಸ್ಸು ತಾನಾಗಿಯೇ ಬರುತ್ತದೆ’ ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಗಣಾಚಾರಿ, ‘ಸದಾ ಕಲಿಕೆಯಲ್ಲಿ ತೊಡಗುವವರು, ಪ್ರಾಮಾಣಿಕವಾಗಿ ಕೆಲಸ ಮಾಡುವವರು, ಬಡವರ ಬಗ್ಗೆ ಸಹಾನುಭೂತಿ ಹೊಂದಿದವರನ್ನು ವಕೀಲಿ ವೃತ್ತಿ ಎಂದಿಗೂ ಕೈ ಬಿಡುವುದಿಲ್ಲ. ಹಣ ಗಳಿಕೆ ಸಾಧ್ಯವಿಲ್ಲವೆಂದು ವೃತ್ತಿ ಬಿಟ್ಟು ಹೋಗುವುದಕ್ಕಿಂತ, ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದು ತಿಳಿಸಿದರು.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ತಮ್ಮ ತಂದೆ ಹಾಗೂ ಸಂವಿಧಾನ ತಜ್ಞ ಎಂ.ಕೆ. ನಂಬಿಯಾರ್ ನೆನಪಿನಲ್ಲಿ ಸ್ಥಾಪಿಸಿದ ಸ್ವರ್ಣ ಪದಕವನ್ನು ಪ್ರಥಮ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ‘ಸಂವಿಧಾನಿಕ ಕಾನೂನು’ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೃಷ್ಣ ಬಾಂದೋಕರ್ ಅವರಿಗೆ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಸುಹಾಸ ಹುದ್ದಾರ ಹಾಗೂ ಉಜ್ವಲಾ ಹವಾಲ್ದಾರ ಸರ್ವೋತ್ತಮ ಪ್ರಶಸ್ತಿ ಪಡೆದರು.

ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಉತ್ತೂರೆ, ವಿದ್ಯಾರ್ಥಿಗಳಾದ ಬಸವಪ್ರಸಾದ ಸಂಕಪಾಲ, ಮಾಳವಿಕಾ ಅನುಭವ ಹಂಚಿಕೊಂಡರು. ಪ್ರಾಂಶುಪಾಲ ಡಾ.ಎ.ಎಚ್. ಹವಾಲ್ದಾರ ಸ್ವಾಗತಿಸಿದರು. ಪ್ರೊ.ಪಿ.ಎ. ಯಜುರ್ವೇದಿ ಪರಿಚಯಿಸಿದರು. ಪ್ರಿಯಾಂಕಾ ರಾಠಿ ನಿರೂಪಿಸಿದರು. ಸ್ನೇಹಾ ಕುಲಕರ್ಣಿ ಹಾಡಿದರು. ಪೂಜಾ ಬಾಡಕುಂದರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.