ಹುಕ್ಕೇರಿ: ಪುರಸಭೆಯ ಹಿರಿಯ ಸದಸ್ಯರೂ ಆದ ಮಹಾವೀರ ವಸಂತ ನಿಲಜಗಿ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಬಹುಮತದಿಂದ ಆಯ್ಕೆಯಾಗಿದ್ದಕ್ಕೆ ಸಾರ್ವಜನಿಕರು, ಅಭಿಮಾನಿಗಳು ಸೋಮವಾರ ಸತ್ಕರಿಸಿದರು.
ಸ್ಥಳೀಯ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಚೇರ್ಮನ್, ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಮಹಾವೀರ ಹಲುವ ಜನಪರ ಸೇವೆ ಮಾಡಿದ್ದಾರೆ. ಎಲ್ಲ ಸಮುದಾಯದವರ ಜತೆ ಉತ್ತಮ ಬಾಂಧವ್ಯ ಹೊಂದಿರುವ ಅವರನ್ನು ಜನ ಪ್ರೀತಿಯಿಂದ ‘ದಾದಾ’ ಎಂದೇ ಸಂಬೋಧಿಸುತ್ತಾರೆ.
2000ರಲ್ಲಿ ಪ್ರಾರಂಭಿಸಿದ ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯು ಮಹಾವೀರ ನೇತೃತ್ವದಲ್ಲಿ 17 ಶಾಖೆ ಹೊಂದಿ, 13,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ 2024–25ನೇ ಸಾಲಿಗೆ ₹3.75 ಕೋಟಿ ಲಾಭ ಗಳಿಸಿದೆ.
ಜತೆಗೆ, ಅವರ ತಂದೆ ವಸಂತ ನಿಲಜಗಿ 2003ರಲ್ಲಿ ಹುಟ್ಟುಹಾಕಿದ ಶಿಕ್ಷಣ ಸಂಸ್ಥೆಯನ್ನು ಹಂತ ಹಂತವಾಗಿ ಬೆಳೆಸುತ್ತ ಇಂದು ಎಲ್.ಕೆ.ಜಿ.ಯಿಂದ ಪದವಿ (ಬಿ.ಕಾಂ ಮತ್ತು ಬಿಸಿಎ) ಕಾಲೇಜಿನವರೆಗೆ ಮತ್ತು ವಸಂತ ಐಟಿಐ ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ.
ಅಧ್ಯಕ್ಷ ಗಾದಿ ವಂಚಿತ: ಕಳೆದ ನಾಲ್ಕು ಬಾರಿ ಪುರಸಭೆಗೆ ಆಯ್ಕೆಯಾದರೂ ಇಲ್ಲಿಯವರೆಗೆ ಅವರಿಗೆ ಅಧ್ಯಕ್ಷ ಗಾದಿ ದಕ್ಕಿಲ್ಲ. ಅವರ ಕಾರ್ಯವೈಖರಿ ಮೆಚ್ಚಿ ಜನರು ಸಿಗಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗ ಅವರಿಗೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಸ್ಥಾನ ಲಭಿಸಿದ್ದರಿಂದ ಅವರ ಅಭಿಮಾನಿಗಳು, ಉದ್ಯೋಗ ಸಮೂಹ ಸಂಸ್ಥೆಯವರು ಸಂತಸ ವ್ಯಕ್ತಪಡಿಸಿ, ಸಂಭ್ರಮಾಚರಣೆ ಮಾಡಿದರು.
ತಮ್ಮ ತಂದೆ ತಾಯಿಯ ಹೆಸರಲ್ಲಿ ಪಟ್ಟಣದಲ್ಲಿ ಮಲ್ಟಿ ಸ್ಪೆಶಾಲಿಟಿ ದೊಡ್ಡ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಿದ್ದು, ಬೈಪಾಸ್ ಬಳಿ ಜಾಗ ಖರೀದಿಸಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.
ಬ್ಯಾಂಕ್ ಸದಸ್ಯರ ಅಂತ್ಯಕ್ರಿಯೆಗೆ ₹5,000 ನೀಡಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಶಿಷ್ಯವೇತನ ಸಹ ನೀಡಲಾಗುತ್ತಿದೆ ಎಂದರು. ಇವರ ಕಾರ್ಯಕ್ಕೆ ಸಹೋದರ ಸಂಜಯ ಮತ್ತು ಪುತ್ರ ಪ್ರಜ್ವಲ್ ಸಾಥ್ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.