ಬೆಳಗಾವಿ: ಜಿಲ್ಲೆಯ ಯರಗಟ್ಟಿ ಸಮೀಪದ ಅಕ್ಕಿಸಾಗರ ಗ್ರಾಮದಲ್ಲಿ ಆಂಜನೇಯ ಅಗ್ರೋ ಸೆಂಟರ್‌ನಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಕೃಷಿ ಪರಿಕರಗಳನ್ನು ಮಂಗಳವಾರ ಜಪ್ತಿ ಮಾಡಲಾಗಿದೆ.
ಕೃಷಿ ಇಲಾಖೆ ಸಚಿವಾಲಯ ವಿಭಾಗದ ಜಾಗೃತ ದಳದ ಅಧಿಕಾರಿಗಳಾದ ಆರ್.ಬಿ. ಪಾಟೀಲ ಮತ್ತು ಸುಪ್ರೀತಾ ಅಂಗಡಿ ದಾಳಿ ನಡೆಸಿದ್ದಾರೆ. ಆ ಅಂಗಡಿಯ ಮಾಲೀಕ ಚಿದಾನಂದ ಎಸ್. ಕತ್ತಿ ಅವರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಕೃಷಿ ಇಲಾಖೆಯಿಂದ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ. ದರಪಟ್ಟಿ, ದಾಸ್ತಾನು ಸೇರಿದಂತೆ ಇತರ ಯಾವುದೇ ದಾಖಲೆಗಳನ್ನು ನಿರ್ವಹಿಸದೆ ಮಾರುತ್ತಿದ್ದುದ್ದಲ್ಲದೇ, ರೈತರಿಗೆ ಬಿಲ್ ಕೊಡದಿರುವುದು ಕೂಡ ಕಂಡುಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.
‘ದಾಳಿ ವೇಳೆ ₹ 1.90 ಲಕ್ಷ ಮೌಲ್ಯದ 30 ಕೀಟನಾಶಕಗಳು, ಬಿತ್ತನೆಬೀಜಗಳು ಹಾಗೂ ರಸಗೊಬ್ಬರದ ಜೊತೆಗೆ ಅಂಗಡಿಯನ್ನೂ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಮೊಕದ್ದಮೆಯನ್ನೂ ದಾಖಲಿಸಲಾಗುವುದು’ ಎಂದು ಹೇಳಿದ್ದಾರೆ.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರವಿ ವರಗಣ್ಣವರ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.