
ಯರಗಟ್ಟಿ: ‘ಕೃಷಿ ರಂಗ ಈಗ ಆಧುನಿಕತೆಯಿಂದ ಕೂಡಿದ್ದು, ಯುವಜನರು ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಬೆಳೆಗಳ ಇಳುವರಿ ಹೆಚ್ಚಿಸಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಕೃಷಿ ನವೋದ್ಯಮಗಳನ್ನು ಸ್ಥಾಪಿಸಬೇಕು’ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಸಮೀಪದ ತೆನಿಕೊಳ್ಳ ಗ್ರಾಮದ ಕೆಎಲ್‍ಇ ಸಂಸ್ಥೆಯ ಕೃಷಿ ಕಾಲೇಜಿನಲ್ಲಿ ಆಯೋಜಿಸಿದ್ದ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿಯಲ್ಲಿ ಪದವಿ ಪಡೆದ ಯುವಜನರು ತಮ್ಮ ಗ್ರಾಮಗಳಿಗೆ ತೆರಳಿ ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಬೇಕು. ಯುವಕ–ಯುವತಿಯರಿಗೆ ತಾಂತ್ರಿಕವಾಗಿ ಬೆಂಬಲ ನೀಡಲು ಈ ಕಾಲೇಜು ಆರಂಭಿಸಿದ್ದೇವೆ. ಉತ್ತಮ ಶೈಕ್ಷಣಿಕ ಅರ್ಹತೆಯುಳ್ಳ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದರು.
‘ಹೊಸ ಕೃಷಿ ಮಹಾವಿದ್ಯಾಲಯದಲ್ಲಿ ಆಧುನಿಕ ಉಪಕರಣ ಒಳಗೊಂಡ 13 ಪ್ರಯೋಗಾಲಯ ಸ್ಥಾಪಿಸಲಾಗಿದೆ. 60 ಎಕರೆ ಪ್ರಾಯೋಗಿಕ ಕ್ಷೇತ್ರ ಹೊಂದಿದ್ದೇವೆ. ಕೃಷಿ ವಿಜ್ಞಾನಗಳ ಕಾಲೇಜು ಸ್ಥಾಪನೆ ನನ್ನ ಕನಸು. ನನ್ನ ಹೃದಯಕ್ಕೆ ಹತ್ತಿರವಾದ ಈ ಸಂಸ್ಥೆಯಲ್ಲಿ ರೈತರು ಮತ್ತು ರೈತ ಮಹಿಳೆಯರ ಮಕ್ಕಳಿಗಷ್ಟೇ ಪ್ರವೇಶ ಕಲ್ಪಿಸಲಾಗಿದೆ. ಎಲ್ಲ ರೀತಿಯ ನೆರವಿನ ಮೂಲಕ ಇದನ್ನು ಉತ್ತಮ ಕೃಷಿ ಸಂಸ್ಥೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದರು.
ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಬಿ.ಪಾಟೀಲ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಂ.ವಿ.ಮಂಜುನಾಥ, ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೊಳೇಕರ ಉಪಸ್ಥಿತರಿದ್ದರು. ಕೆಎಲ್‍ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ತಟವಟಿ, ನಿರ್ದೇಶಕರಾದ ಡಾ.ವಿ.ಎಸ್.ಸಾಧುನವರ, ಎಸ್.ಸಿ.ಮೆಟಗುಡ್ಡ, ಬಸವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ಡಾ.ಸುನೀಲ ಜಲಾಲಪುರೆ, ಮಂಜುನಾಥ ಚೌರಡ್ಡಿ, ಶಂಕರಗೌಡ ಪಾಟೀಲ, ಪ್ರಿಯಂಕಾ ಬೋಳೆತ್ತಿನ ಉಪಸ್ಥಿತರಿದ್ದರು.
ಡೀನ್ ಪಿ.ಎಸ್.ಹೂಗಾರ ಸ್ವಾಗತಿಸಿದರು. ಬಾಳೇಶ ಗೌಡಪ್ಪನವರ ನಿರೂಪಿಸಿದರು. ಸೌರಭ ಮುನವಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.