ADVERTISEMENT

ಕಿತ್ತೂರು ಉತ್ಸವಕ್ಕೆ ‘ಬೆಳ್ಳಿ ಹಬ್ಬ’ದ ಸಂಭ್ರಮ- ಸಿಎಂ ಬೊಮ್ಮಾಯಿ ಚಾಲನೆ ನಾಳೆ

ಪ್ರದೀಪ ಮೇಲಿನಮನಿ
Published 22 ಅಕ್ಟೋಬರ್ 2021, 7:27 IST
Last Updated 22 ಅಕ್ಟೋಬರ್ 2021, 7:27 IST
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಇದೇ 23 ಮತ್ತು 24ರವರೆಗೆ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾ ತಂಡದವರು ಪೂರ್ವ ತಯಾರಿ ನಡೆಸಿದರು
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಇದೇ 23 ಮತ್ತು 24ರವರೆಗೆ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾ ತಂಡದವರು ಪೂರ್ವ ತಯಾರಿ ನಡೆಸಿದರು   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಯುದ್ಧದಲ್ಲಿ ಗೆದ್ದ ಸಂಭ್ರಮಕ್ಕಾಗಿ ಸರ್ಕಾರದಿಂದ ಆಚರಿಸುತ್ತಾ ಬಂದಿರುವ ಇತಿಹಾಸ ಪ್ರಸಿದ್ಧ ರಾಣಿ ‘ಚನ್ನಮ್ಮನ ಕಿತ್ತೂರು ಉತ್ಸವ’ ಆಚರಣೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಅ.23ರಂದು ಸಂಜೆ 7ಕ್ಕೆ ಈ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ವಿಜಯದಶಮಿ ಹಬ್ಬದ ಸಡಗರ ಇನ್ನೂ ಹಸಿರಿರುವಾಗ ಹಾಗೂ ದೀಪಾವಳಿ ಹಬ್ಬ ಹೊಸ್ತಿಲಲ್ಲಿ ಬಂದು ನಿಂತಿರುವಾಗ, ಕಿತ್ತೂರು ಉತ್ಸವದ ಬೆಳ್ಳಿಹಬ್ಬ (25ನೇ ವರ್ಷಾಚರಣೆ) ಬಂದಿರುವುದು ಈ ಭಾಗದ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಲಾಢ್ಯ ಬ್ರಿಟಿಷರ ವಿರುದ್ಧ ‘ವೀರಭದ್ರ ಕೂಗು’ ಹೊಡೆದ ಹಿರಿಮೆ ಇಲ್ಲಿಯ ರಾಣಿ ಚನ್ನಮ್ಮನಿಗೆ ಸಲ್ಲುತ್ತದೆ. ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಅವರಾದಿ ವೀರಪ್ಪ, ಸರದಾರ ಗುರುಸಿದ್ಧಪ್ಪ ಅವರಂತಹ ಅನೇಕ ಎಂಟೆದೆ ಭಂಟರನ್ನು ಪಡೆದ ವೀರಭೂಮಿ ಇಲ್ಲಿನದಾಗಿದೆ.

ADVERTISEMENT

ತುಂಬಿದ ಸಡಗರ:

ಸಂಸ್ಥಾನ ಕಾಲದ ರಾಜಧಾನಿಯಾಗಿ ಮೆರೆದಿದ್ದು ಕಿತ್ತೂರು. ಈಗ ಪಟ್ಟಣದ ತುಂಬೆಲ್ಲ ‘ಉತ್ಸವ ಬೆಳ್ಳಿಹಬ್ಬದ ದಿಬ್ಬಣ’ದ ಸಡಗರ ಮನೆಮಾಡಿದೆ. ಇಡೀ ಊರೇ ಸಿಂಗಾರಗೊಂಡಿದೆ. ಕಟ್ಟಡಗಳು, ಮರಗಳು, ಕೋಟೆ ಆವರಣದ ಕೆಲ ಸ್ಮಾರಕಗಳು ರಾತ್ರಿ ಹೊತ್ತಲ್ಲಿ ವಿದ್ಯುದ್ದೀಪದ ಬೆಳಕು ಅರಳಿಸಿಕೊಂಡು ಕಂಗೊಳಿಸುತ್ತಿವೆ. ಎರಡು ದಿನಗಳ ಕಾಲ ಕೋಟೆ ಆವರಣದೊಳಗೆ ನಡೆಯಲಿರುವ ಉದ್ಘಾಟನೆ, ಸಾಂಸ್ಕೃತಿಕ ಮತ್ತು ಇತರ ಕಾರ್ಯಕ್ರಮ ಕಣ್ತುಂಬಿಸಿಕೊಳ್ಳಲು ನಿರ್ಮಾಣಗೊಂಡಿರುವ ವಿಶಾಲ ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆಗಳು ಪೂರ್ಣಗೊಳ್ಳುವತ್ತ ಸಾಗಿವೆ.

ಮುಖ್ಯ ವೇದಿಕೆ ಹಾಗೂ ಮಾರಾಟ ಮತ್ತು ವಸ್ತು ಪ್ರದರ್ಶನ ಮಳಿಗೆಯನ್ನು ‘ವಾಟರ್‌ ಪ್ರೂಫ್‌’ ಆಗಿ ನಿರ್ಮಿಸಲಾಗಿದೆ. ‘100 ಮಾರಾಟ ಮತ್ತು ಪ್ರದರ್ಶನ ಮಳಿಗೆ ನಿರ್ಮಿಸಲಾಗಿದೆ. ಕೋಟೆ ಆವರಣದೊಳಗೆ ನಿರ್ಮಿಸಲಾಗುತ್ತಿದ್ದ ವಸ್ತು ಪ್ರದರ್ಶನ ಮಳಿಗೆಯನ್ನು ಈ ಸಲ ಕೆಎನ್‌ ವಿವಿ ಸಂಘದ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಕಬಡ್ಡಿ, ಕುಸ್ತಿ ಇಲ್ಲ:

ಕೋವಿಡ್ ಹಿನ್ನೆಲೆಯಲ್ಲಿ ಕಬಡ್ಡಿ, ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗಳನ್ನು ಈ ಬಾರಿ ರದ್ದುಪಡಿಸಲಾಗಿದೆ. ಇವು ಉತ್ಸವದ ಪ್ರಮುಖ ಆಕರ್ಷಣೆಗಳಾಗಿದ್ದವು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಮಾರ್ಗದರ್ಶನದಲ್ಲಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮಠದ ಸೇರಿದಂತೆ ಅನೇಕ ಇಲಾಖೆ ಸಿಬ್ಬಂದಿ ಉತ್ಸವ ಯಶಸ್ಸಿಗೆ ಶ್ರಮಿಸುತ್ತಿದ್ದು, ಸಮಗ್ರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಚನ್ನಮ್ಮ ವೃತ್ತ ಸೇರಿ ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಹದ್ದಿನ ಕಣ್ಣಿಟ್ಟಿವೆ. ಮುಖ್ಯ ವೇದಿಕೆ ಹಿಂಭಾಗದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಪಟ್ಟಣದಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.