ADVERTISEMENT

ನುಡಿ ಜಾತ್ರೆಗೆ ‘ಗೋಕಾವಿ ನಾಡು’ ಸಜ್ಜು

ಇದೇ ಮೊದಲ ಬಾರಿಗೆ ಇಲ್ಲಿ ಜಿಲ್ಲಾ ಸಮ್ಮೇಳನ ಆಯೋಜನೆ

ರಾಮೇಶ್ವರ ಕಲ್ಯಾಣಶೆಟ್ಟಿ
Published 27 ಜೂನ್ 2019, 16:17 IST
Last Updated 27 ಜೂನ್ 2019, 16:17 IST
ಗೋಕಾಕದ ಕೆಎಲ್‌ಇ ಎಂ.ಬಿ. ಮುನವಳ್ಳಿ ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವೇದಿಕೆ ಸಜ್ಜುಗೊಳಿಸುವ ಕಾರ್ಯ ಗುರುವಾರ ನಡೆಯಿತು
ಗೋಕಾಕದ ಕೆಎಲ್‌ಇ ಎಂ.ಬಿ. ಮುನವಳ್ಳಿ ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವೇದಿಕೆ ಸಜ್ಜುಗೊಳಿಸುವ ಕಾರ್ಯ ಗುರುವಾರ ನಡೆಯಿತು   

ಗೋಕಾಕ: ‘ಗೋಕಾವಿ ನಾಡು‌’ ಇದೇ ಪ್ರಥಮ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜೂನ್ 28 ಹಾಗೂ 29ರಂದು ಆಯೋಜಿಸಲಾಗಿರುವ 13ನೇ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೆಎಲ್‌ಇ ಸಂಸ್ಥೆಯ ಎಂ.ಬಿ. ಮುನವಳ್ಳಿ ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ ಕನ್ನಡದ ಕಹಳೆ ಮೊಳಗಲಿದ್ದು, ನಗರದಾದ್ಯಂತ ಸಂಭ್ರಮ ಮನೆ ಮಾಡಿದೆ. ಕನ್ನಡ ಬಾವುಟಗಳು ರಾರಾಜಿಸುತ್ತಿದ್ದು, ಕನ್ನಡಪ್ರೇಮಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುತ್ತಿವೆ. ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದೆ.

ADVERTISEMENT

‘ಇದುವರೆಗೆ 12 ಜಿಲ್ಲಾಮಟ್ಟದ ಸಮ್ಮೇಳನಗಳು ನಡೆದಿವೆಯಾದರೂ ಗೋಕಾಕಕ್ಕೆ ಅವಕಾಶ ಸಿಕ್ಕಿರಲಿಲ್ಲ. ಗೋಕಾಕ ತಾಲ್ಲೂಕು ಘಟಕದ ಈಗಿನ ಅಧ್ಯಕ್ಷ ಮಹಾಂತೇಶ ತಾಂವಶಿ ಹಾಗೂ ಪದಾಧಿಕಾರಿಗಳು ಮತ್ತು ಗೋಕಾವಿ ನಾಡಿನ ಸಾಹಿತ್ಯಾಸಕ್ತರ ನಿರಂತರ ಪ್ರಯತ್ನದ ಫಲವಾಗಿ 13ನೇ ನುಡಿ ಜಾತ್ರೆಯ ತೇರು ಎಳೆಯುವ ಅವಕಾಶ ದೊರೆತಿದೆ’ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ತಿಳಿಸಿದರು.

ಕರಜಗಿ ಉಪನ್ಯಾಸ ವಿಶೇಷ:ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಲಿದೆ. 9ಕ್ಕೆ ಬಸವೇಶ್ವರ ವೃತ್ತದಿಂದ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಚಿಂತಕ ಗುರುರಾಜ ಕರಜಗಿ ವಿಶೇಷ ಉಪನ್ಯಾಸ ನೀಡುವರು. ಶಾಸಕ ರಮೇಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.

ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಗೋಷ್ಠಿಯಲ್ಲಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಭವಿಷ್ಯ, ಕನ್ನಡ ಭಾಷೆಯ ಅಸ್ಮಿತೆ ಹಾಗೂ ತಂತ್ರಜ್ಞಾನದ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ವೈಚಾರಿಕ ಗೋಷ್ಠಿಯಲ್ಲಿ ಯುವಜನಾಂಗದ ತವಕ–ತಲ್ಲಣಗಳ ಕುರಿತು ಬೆಳಕು ಚೆಲ್ಲಲಾಗುವುದು. ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ: ಅಂದು–ಇಂದು ಕುರಿತು ಅವಲೋಕಿಸಲಾಗುವುದು. ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ನಡೆಯಲಿದೆ.

ಸಾವಿರಾರು ಮಂದಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೊದಲ ದಿನವಾದ ಶುಕ್ರವಾರ ಧ್ವಜಾರೋಹಣ, ಮೆರವಣಿಗೆಯೊಂದಿಗೆ ಚಾಲನೆ ದೊರೆಯಲಿದೆ. ಕಲಾತಂಡದವರು ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 1,500 ಮಂದಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಮಳೆ ಬಂದರೆ ತೊಂದರೆ ಆಗದಿರಲೆಂದು ವೇದಿಕೆಗೆ ವಿಶೇಷ ಹೊದಿಕೆ ಹಾಕಲಾಗಿದೆ. ಜೋರು ಮಳೆ ಬಂದಲ್ಲಿ, ಪಕ್ಕದ ಶಾಲಾ ಕಟ್ಟಡದ ಮೊದಲ ಮಹಡಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. 800 ಜನರಿಗೆ ಅಲ್ಲಿ ಆಸನ ವ್ಯವಸ್ಥೆ ಕಲ್ಪಿಸುವುದಕ್ಕೆ ಪರಿಷತ್‌ ವ್ಯವಸ್ಥೆ ಮಾಡಿಕೊಂಡಿದೆ.

ಹುಗ್ಗಿಯೂಟ:ಮಧ್ಯಾಹ್ನದ ಊಟಕ್ಕೆ ಹುಗ್ಗಿ, ಪಲ್ಯ, ಅನ್ನ–ಸಾರು ಬಡಿಸಲು ಸಿದ್ಧತೆ ನಡೆದಿದೆ. ಸಂಜೆ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ರಾತ್ರಿಯೂ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾರೋಪ ಸಮಾರಂಭದ ಬಳಿಕ ವಾಪಸಾಗಲು ಸಾರಿಗೆ ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸಲು ಇಲ್ಲಿಯ ಸಾರಿಗೆ ಘಟಕ ಸಮ್ಮತಿಸಿದೆ ಎಂದು ಪರಿಷತ್‌ ಮೂಲಗಳು ತಿಳಿಸಿವೆ.

ಮಹಾಮಂಟಪಕ್ಕೆ ಕುಲಗೋಡ ತಮ್ಮಣ್ಣ–ಕೌಜಲಗಿ ನಿಂಗಮ್ಮ ಹಾಗೂ ಮುಖ್ಯವೇದಿಕೆಗೆ ಬಸವರಾಜ ಕಟ್ಟೀಮನಿ ಅವರ ಹೆಸರಿಟ್ಟು ಕೊಡುಗೆಯನ್ನು ಸ್ಮರಿಸಲಾಗಿದೆ. ಜಾನಪದ ದಿಗ್ಗಜ ಡಾ.ಬೆಟಗೇರಿ ಕೃಷ್ಣಶರ್ಮ, ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ, ಶಿಕ್ಷಣ ತಜ್ಞ ಡಾ.ಸಿ.ಚ. ನಂದೀಮಠ, ಚಿತ್ರಕಲಾವಿದ ಭೀಮರಾವ್ ಮುರಗೋಡ, ಕೆಎಲ್‌ಇ ಸಂಸ್ಥಾಪಕ ಬಿ.ಬಿ. ಮಮದಾಪುರ, ಸಂಶೋಧಕ ಪ್ರೊ.ಕೆ.ಜಿ. ಕುಂದಣಗಾರ, ಕವಿವಿ ರೂವಾರಿ ರ‍್ಯಾಂಗ್ಲರ್ ಡಿ.ಸಿ. ಪಾವಟೆ, ಸಾಹಿತಿ ಡಾ.ನಿಂಗಣ್ಣ ಸಣ್ಣಕ್ಕಿ– ಬಾಳೇಶ ಲಕ್ಷೆಟ್ಟಿ ಅವರ ಹೆಸರನ್ನು ಮಹಾದ್ವಾರಗಳಿಗೆ ಇಡಲಾಗಿದೆ.

‘ಸ್ವಾಗತ ಸಮಿತಿ ಪದಾಧಿಕಾರಿಗಳು ಕನ್ನಡದ ಹಬ್ಬದ ಯಶಸ್ಸಿಗೆ ವಾರದಿಂದ ಶ್ರಮಿಸುತ್ತಿದ್ದಾರೆ’ ಎಂದು ಕಾರ್ಯಕ್ರಮ ಸಂಯೋಜನಾ ಸಮಿತಿ ಸದಸ್ಯ ಜಯಾನಂದ ಮಾದರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.