
ಸಂಕೇಶ್ವರ: ಅಂಬೇಡ್ಕರ್ ಪ್ರತಿಮೆಗಾಗಿ ಮಂಜೂರಾಗಿದ್ದ ₹1.50 ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದ ನಾಲ್ವರ ವಿರುದ್ದ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಣಗಲಾ ಗ್ರಾಮ ಪಂಚಾಯಿತಿ ಹದ್ದಿಯಲ್ಲಿ 14 ನೇ ಹಣಕಾಸಿನ ಯೋಜನೆಯ ಪರಿಶಿಷ್ಟ ಜಾತಿಯ ಅನುದಾನದಡಿಯಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 8 ಅಡಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿತ್ತು.
ಪ್ರತಿಮೆ ಅನಾವರಣಗೊಳಿಸಿದಂತೆ ನಕಲಿ ದಾಖಲೆ ನಿರ್ಮಿಸಿ ₹1,47 ಲಕ್ಷವನ್ನು ಕಣಗಲಾ ಗ್ರಾಮ ಪಂಚಾಯಿತಿಯ ಬ್ಯಾಂಕ್ ಖಾತೆಯಿಂದ ತೆಗೆದುಕೊಂಡ ಕುರಿತು ಅದೇ ಗ್ರಾಮ ಪಂಚಾಯಿತಿಯ ಸದಸ್ಯ ಮಹಾದೇವ ಸಜ್ಜರಾವ್ ಸನ್ನಾಯಿಕ ಅವರು ಕಣಗಲಾ ಗ್ರಾಮ ಪಂಚಾಯಿತಿಯ ಪಿಡಿಒ ದಯಾನಂದ ನಾಯಿಕ, ಕಣಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಸಂತೋಷ ನಾಯಿಕ, ಜಿಲ್ಲಾ ಪಂಚಾಯಿತಿಯ ಸಹಾಯಕ ಅಭಿಯಂತ ರಾಜಕುಮಾರ ಶ್ರೀಖಾಂಡೆ ಹಾಗೂ ಜಿಲ್ಲಾ ಪಂಚಾಯಿತಿಯ ಕಾರ್ಯಕಾರಿ ಅಭಿಯಂತ ಅಡಿವೆಪ್ಪಾ ಪಟ್ಟಣಶೆಟ್ಟಿ ಅವರ ವಿರುದ್ದ ದೂರು ನೀಡಿದ್ದರು. ಈ ದೂರು ಪರಿಗಣಿಸಿ ಸಂಕೇಶ್ವರ ಪೋಲಿಸರು ದಾಖಲಿಸಿಕೊಂಡಿದ್ದಾರೆ.