ADVERTISEMENT

ಹುಕ್ಕೇರಿ ಶ್ರೀಗಳಿಂದ ಆಂಬುಲೆನ್ಸ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 8:34 IST
Last Updated 21 ಮೇ 2021, 8:34 IST
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಜಿಲ್ಲಾಡಳಿತಕ್ಕೆ ಶುಕ್ರವಾರ ನೀಡಿದ ಆಂಬುಲೆನ್ಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪೂಜೆ ಸಲ್ಲಿಸಿದರು
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಜಿಲ್ಲಾಡಳಿತಕ್ಕೆ ಶುಕ್ರವಾರ ನೀಡಿದ ಆಂಬುಲೆನ್ಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪೂಜೆ ಸಲ್ಲಿಸಿದರು   

ಬೆಳಗಾವಿ: ‘ಸಮಾಜಮುಖಿ ಕೆಲಸ ನಿರ್ವಹಿಸುತ್ತಾ ಬರುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜಿಲ್ಲೆಗೆ ಎರಡು ಆಂಬುಲೆನ್ಸ್‌ಗಳನ್ನು ನೀಡಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹುಕ್ಕೇರಿ ಹಿರೇಮಠದ ಪ್ರತಿಷ್ಠಾನದಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ನೀಡಲಾದ ಆಂಬುಲೆನ್ಸ್‌ಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

‘ವಿಶ್ವವನ್ನೇ ತಲ್ಲಣ ಮೂಡಿಸಿರುವ ಕೊರೊನಾ ಸೋಂಕಿನಿಂದ ಸಾವು–ನೋವುಗಳು ಹೆಚ್ಚಾಗುತ್ತಿವೆ. ಆರ್ಥಿಕ ಪರಿಸ್ಥಿತಿಯೂ ಕುಸಿದಿದೆ. ಈ ವೇಳೆ ಮಠ ನೆರವಾಗಿರುವುದು ಶ್ಲಾಘನೀಯ’ ಎಂದರು.

ADVERTISEMENT

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ‘ಹುಕ್ಕೇರಿ ಹಿರೇಮಠ ಜಿಲ್ಲೆಗೆ ಆದರ್ಶ ಮಠವಾಗಿದೆ’ ಎಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನಗರ ಹಾಗೂ ಹುಕ್ಕೇರಿ ತಾಲ್ಲೂಕಿನ ಜನರ ಅನಕೂಲಕ್ಕಾಗಿ ಆಂಬುಲೆನ್ಸ್‌ಗಳನ್ನು ನೀಡಲಾಗಿದೆ. ಕೋವಿಡ್-19 ಎರಡನೇ ಅಲೆ ಭೀಕರವಾಗಿದೆ. ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವ ಬಿಟ್ಟು ಜನರ ಸೇವೆ ಮಾಡಲಾಗುತ್ತಿದೆ’ ಎಂದು ಹೇಳಿದರು.‌

‘ಮದುವೆಯಲ್ಲಿ ಜನ ಸೇರಿಸದಂತೆ ಸರ್ಕಾರ ಆದೇಶ ಹೊರಡಿಸಿದೆ. ಮದುವೆ ಮಾಡಿ. ಆದರೆ, ಹಸಿದ ಜನರಿಗೆ ಅನ್ನದಾನ ಮಾಡಿ’ ಎಂದರು.

‘ಹಿರೇಮಠದಿಂದ ಕೋವಿಡ್ ಮೊದಲನೇ ಅಲೆಯಲ್ಲಿ ₹ 12 ಲಕ್ಷ ಮೌಲ್ಯದ ಆಹಾರದ ಕಿಟ್‌ಗಳನ್ನು ಒದಗಿಸಲಾಗಿದೆ. ನೆರೆ ಬಂದಾಗಲೂ ಶ್ರೀಮಠ ಜನರ ಸೇವೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ವೈದ್ಯರು ಹೆಚ್ಚು ಹಳ್ಳಿ ಕಡೆ ಹೋಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಬುಡಾ ಎಂಜಿನಿಯರ್ ಮಹಾಂತೇಶ ಹಿರೇಮಠ, ವೀರೇಶ ಹಿರೇಮಠ,ಅರುಣ ಐಹೊಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.