ADVERTISEMENT

ರೈತರ ವಿರೋಧದ ನಡುವೆಯೂ ಕೃಷ್ಣಾಗೆ ಹರಿದ ಹಿಡಕಲ್‌ ನೀರು

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:04 IST
Last Updated 20 ಮೇ 2019, 13:04 IST

ಬೆಳಗಾವಿ: ರೈತರ ವಿರೋಧದ ನಡುವೆಯೂ ಕೃಷ್ಣಾ ನದಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಿಂದ ಸೋಮವಾರ ನೀರು ಹರಿಸಲಾಯಿತು. ಮೊದಲ ದಿನವೇ 3,000 ಕ್ಯೂಸೆಕ್‌ ನೀರು ಬಿಡಲಾಗಿದ್ದು, ಮುಂದಿನ ಮೂರು ದಿನಗಳವರೆಗೆ ಪ್ರತಿದಿನ ತಲಾ 1,000 ಕ್ಯೂಸೆಕ್‌ ನೀರು ಹರಿಯಲಿದೆ.

ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಈ ನೀರನ್ನು ಬಳಸಿಕೊಳ್ಳಬೇಕು. ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬಾರದೆಂದು ಅಧಿಕಾರಿಗಳು ನದಿತೀರದ ಜನರಲ್ಲಿ ಮನವಿ ಮಾಡಿದ್ದಾರೆ. ನೀರಿನ ದುರ್ಬಳಕೆ ತಡೆಯಲು ಅಲ್ಲಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ನದಿ ತೀರದ ಜನರು ನೀರಿಗಾಗಿ ಪರದಾಡುತ್ತಿದ್ದರು. ಕೋಯ್ನಾ ಜಲಾಶಯದಿಂದ ನೀರು ಬಿಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಮಹಾರಾಷ್ಟ್ರ ಸರ್ಕಾರವು ಸ್ಪಂದಿಸಿರಲಿಲ್ಲ. ಇದಕ್ಕೆ ಪರ್ಯಾಯವಾಗಿ ಹಿಡಕಲ್‌ ಜಲಾಶಯದ ನೀರನ್ನೇ ಬಳಸಲು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತೀರ್ಮಾನಿಸಿದ್ದರು. ಅವರ ತೀರ್ಮಾನದಂತೆ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌ ನೀರು ಹರಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದರು.

ADVERTISEMENT

‘ಬೆಳಿಗ್ಗೆ 8 ಗಂಟೆಗೆ ಜಲಾಶಯದಿಂದ ನೀರು ಹರಿಸಲು ಆರಂಭಿಸಲಾಯಿತು. ಈ ನೀರು ಸುಮಾರು 22 ಕಿ.ಮೀ ದೂರವಿರುವ ಧೂಪದಾಳ ಬ್ಯಾರೇಜ್‌ಗೆ ರಾತ್ರಿಯವರೆಗೆ ತಲುಪಲಿದೆ. ಈ ಬ್ಯಾರೇಜ್‌ ತುಂಬಿದ ನಂತರ ಕಾಲುವೆಗೆ ನೀರು ಹರಿಯಲಿದೆ. ಮಂಗಳವಾರದಿಂದ ಮೂರು ದಿನಗಳವರೆಗೆ ಪ್ರತಿದಿನ 1,000 ಕ್ಯೂಸೆಕ್‌ ನೀರು ನೀಡಲಾಗುವುದು. 94 ಕಿ.ಮೀ ಹರಿದ ಬಳಿಕ ಕೃಷ್ಣಾ ನದಿಪಾತ್ರಕ್ಕೆ ಸೇರಲಿದೆ’ ಎಂದು ಘಟಪ್ರಭಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಡಿಕೆಶಿ ವಿರುದ್ಧ ಪ್ರತಿಭಟನೆ:

‘ಹಿಡಕಲ್‌ ಜಲಾಶಯದ ನೀರನ್ನು ಕೃಷ್ಣಾ ನದಿಗೆ ಹರಿಸಿದರೆ ನಮಗೆ ಕುಡಿಯಲು ನೀರಿನ ಕೊರತೆ ಉಂಟಾಗಲಿದೆ. ತಕ್ಷಣ ನೀರನ್ನು ತಡೆಹಿಡಿಯಬೇಕು’ ಎಂದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ರೈತರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ನೀರು ಬಿಡುವ ನಿರ್ಧಾರ ಕೈಗೊಂಡ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಮಹಾರಾಷ್ಟ್ರ ಸರ್ಕಾರದ ಮನವೊಲಿಸಿ, ಕೃಷ್ಣಾಗೆ ನೀರು ತರಬೇಕಿತ್ತು. ಅದನ್ನು ಬಿಟ್ಟು, ಹಿಡಕಲ್‌ ಜಲಾಶಯದಿಂದ ನೀರನ್ನು ಹರಿಸಬಾರದಿತ್ತು. ಗೋಕಾಕ ಹಾಗೂ ಮೂಡಲಗಿ ತಾಲ್ಲೂಕು ಸುತ್ತಮುತ್ತಲಿನ ಜನರಿಗೆ ನೀರಿನ ಕೊರತೆ ಇದ್ದು, ತಕ್ಷಣ ಘಟಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.