ADVERTISEMENT

ಬೆಳಗಾವಿ: ವಿಶೇಷಚೇತನ ಮಗು ದತ್ತು ಪಡೆದ ಇಟಲಿ ದಂಪತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 5:05 IST
Last Updated 18 ಫೆಬ್ರುವರಿ 2025, 5:05 IST
<div class="paragraphs"><p>ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿನ ವಿಶೇಷಚೇತನ ಮಗುವನ್ನು ಇಟಲಿ ದೇಶದ ದಂಪತಿ ಬುಜಾರ್ ಡೆಡೆ ಹಾಗೂ ಕೋಸ್ತಾಂಜಾ ಸೋಮವಾರ ದತ್ತು ಪಡೆದರು</p></div><div class="paragraphs"><p></p></div>

ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿನ ವಿಶೇಷಚೇತನ ಮಗುವನ್ನು ಇಟಲಿ ದೇಶದ ದಂಪತಿ ಬುಜಾರ್ ಡೆಡೆ ಹಾಗೂ ಕೋಸ್ತಾಂಜಾ ಸೋಮವಾರ ದತ್ತು ಪಡೆದರು

   

ಬೆಳಗಾವಿ: ಇಲ್ಲಿನ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿನ ವಿಶೇಷಚೇತನ ಮಗುವನ್ನು ಇಟಲಿ ದೇಶದ ದಂಪತಿ ಸೋಮವಾರ ದತ್ತು ಪಡೆದರು.

ADVERTISEMENT

ಇಟಲಿಯ ಪ್ಲಾರೆನ್ಸ್ ನಗರದ ನಿವಾಸಿಗಳಾದ ಕೋಸ್ತಾಂಜಾ ಹಾಗೂ ಬುಜಾರ್ ಡೆಡೆ ದಂಪತಿ ದತ್ತು ಪಡೆದವರು. ಈ ದಂಪತಿಗೆ ಮಕ್ಕಳಿಲ್ಲ. ಕೋಸ್ತಾಂಜಾ ಅವರು ಇಟಲಿ ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವೈದ್ಯರಾಗಿದ್ದರೆ, ಬುಜಾರ್ ಡೆಡೆ ಅಪಘಾತದಲ್ಲಿ ಅಂಗವಿಕಲರಾಗಿದ್ದಾರೆ. ಅವರಂತೆ ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ತರಬೇತಿ ನೀಡುತ್ತಾರೆ.

ದತ್ತು ಪಡೆದ ಎರಡೂವರೆ ವರ್ಷದ ಮಗುವಿಗೆ ಆನಂದ ಎಂದು ಹೆಸರಿಡಲಾಗಿದೆ. ಈ ಮಗು ಅವಧಿಪೂರ್ವ ಜನಿಸಿತ್ತು. ಆಗ 1.3 ಕೆಜಿ ತೂಕ ಮಾತ್ರ ಇತ್ತು. ದೃಷ್ಟಿದೋಷವೂ ಸೇರಿ ಆರೋಗ್ಯದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆತ್ತವರು ಬಿಟ್ಟುಹೋದ ಹಸುಳೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ರಕ್ಷಣೆ ಮಾಡಿದ್ದರು. ಎರಡೂವರೆ ವರ್ಷಗಳಿಂದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಪೋಷಣೆ ಮಾಡಲಾಗಿದೆ.

‘ಪೋಷಕರು ಕೂಲಂಕಶ ವಿಚಾರ ಮಾಡಿ, ಆರೋಗ್ಯವಂತ ಮಗುವನ್ನು ಮಾತ್ರ ಪಡೆಯುತ್ತಾರೆ. ತಮ್ಮ ಭವಿಷ್ಯಕ್ಕೆ ಮಗು ಆಸರೆಯಾಗುತ್ತದೆ ಎಂದು ಯೋಚಿಸುತ್ತಾರೆ. ಆದರೆ, ಕೋಸ್ತಾಂಜಾ ಹಾಗೂ ಬುಜಾರ್ ಡೆಡೆ ದಂಪತಿ ವಿಶೇಷಚೇತನ ಮಗುವಿಗೆ ಹೊಸಬಾಳು ನೀಡಲು ಬಂದಿದ್ದಾರೆ. ತಮಗೆ ಮಕ್ಕಳಾಗಲಿಲ್ಲ ಎಂದು ಕೊರಗದೇ, ವಿಶೇಷ ಚೇತನ ಮಗುವೊಂದನ್ನು ಪೋಷಣೆ ಮಾಡಲು ಮುಂದಾಗಿದ್ದು ಪ್ರಶಂಸನೀಯ’ ಎಂದು ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಡಾ.ಮನಿಷಾ ಭಾಂಡನಕರ್‌ ತಿಳಿಸಿದರು.

‘ಈ ದಂಪತಿ ಆರು ವರ್ಷಗಳ ಹಿಂದೆ ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ‘ಕಾರಾ’ ನಿಯಮ (ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ)ದಂತೆ ಎಲ್ಲವನ್ನೂ ಪರಿಶೀಲಿಸಿ, ಸಂದರ್ಶನ ಮಾಡಿ ಮಗು ದತ್ತು ನೀಡಲಾಗಿದೆ. ಮಂಗಳವಾರ (ಫೆ.18) ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಗುವನ್ನು ಹಸ್ತಾಂತರಿಸಲಾಗುವುದು’ ಎಂದು ಅವರು ಹೇಳಿದರು.

ಈ ಕೇಂದ್ರದಿಂದ ಈವರೆಗೆ 120 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ 13 ಮಕ್ಕಳನ್ನು ವಿದೇಶಿ ಪೋಷಕರು ‍ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.