ADVERTISEMENT

ನನ್ನದೂ ಮೈಸೂರು ಗರಡಿ, ಏಕವಚನದ ಟೀಕೆ ಸಹಿಸಲ್ಲ: ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 14:31 IST
Last Updated 17 ಜನವರಿ 2024, 14:31 IST
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರದ ನಾಗನೂರು ಬಿಜೆಪಿ ಕಾರ್ಯಕರ್ತರು ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ರಾಮಮಂದಿರದ ಪ್ರತಿಕೃತಿ ನೀಡಿದರು
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರದ ನಾಗನೂರು ಬಿಜೆಪಿ ಕಾರ್ಯಕರ್ತರು ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ರಾಮಮಂದಿರದ ಪ್ರತಿಕೃತಿ ನೀಡಿದರು   

ಚನ್ನಮ್ಮನ ಕಿತ್ತೂರು: ‘ನಾನೂ ಮೈಸೂರಿನವನು, ಅಲ್ಲಿಯ ಗರಡಿಯಲ್ಲಿ ಪಳಗಿದ್ದೇನೆ. ನಮ್ಮವರನ್ನು ಏಕವಚನದಲ್ಲಿ ಟೀಕಿಸಿದರೆ ಸಹಿಸುವುದುಂಟೆ’ ಎಂದು ಸಂಸದ ಅನಂತಕುಮಾರ ಹೆಗಡೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅಮ್ಮನ ಎದೆ ಹಾಲು ಕುಡಿದು ಬೆಳೆದಿದ್ದೇನೆ. ರಾಮ, ದೇವಸ್ಥಾನ ಮತ್ತು ಅಮ್ಮನ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ’ ಎಂದರು.

‘ಮಹಾಯುದ್ಧ (ಲೋಕಸಭೆ ಚುನಾವಣೆ) ಪ್ರಾರಂಭವಾಗಿದೆ. ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ ಅಥವಾ ಭರತನಾಟ್ಯಕ್ಕೆ ಅವಕಾಶವಿಲ್ಲ. ಹೇಗೆ ಮಾತನಾಡಬೇಕೊ ಹಾಗೆಯೇ ಮಾತನಾಡಬೇಕು’ ಎಂದರು.

ADVERTISEMENT

‘ಚುನಾವಣೆಯಲ್ಲಿ ಹಣ ಕೊಟ್ಟು ನಾನು ಆಯ್ಕೆಯಾಗಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ 4.75 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದೆ. ಇದು ದಕ್ಷಿಣ ಭಾರತದಲ್ಲೇ ದಾಖಲೆಯಾಗಿದೆ. ಈ ಬಾರಿ ಯಾರೇ ಅಭ್ಯರ್ಥಿಯಾದರೂ ರಾಷ್ಟ್ರಮಟ್ಟದಲ್ಲಿ ದಾಖಲೆ ಆಗುವ ರೀತಿ ಗೆಲ್ಲಿಸಬೇಕು’ ಎಂದು ಅವರು ಕೋರಿದರು.

‘ಮಂದಿರಗಳನ್ನು ಕೆಡವಿ ಎಲ್ಲಿ ಮಸೀದಿ ನಿರ್ಮಿಸಿದ್ದಾರೋ, ಅಲ್ಲಿಯ ಕಲ್ಲುಗಳು ಪಿಸುಗುಡುತ್ತಿವೆ. ಅಲ್ಲಿ ಮತ್ತೆ ಹಿಂದೂ ದೇವಾಲಯ ನಿರ್ಮಿಸಬೇಕಿದೆ. ರಣಭೈರವ ಎದ್ದಾಗಿದೆ. ಸಾವಿರ ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದ್ದು, ಈಗ ಕಾಲ ಕೂಡಿ ಬರುತ್ತಿದೆ’ ಎಂದರು.

ನನ್ನ ಬಳಿ ಬರುವವರಿಗೆ ರಾಜಕಾರಣ ಬಿಟ್ಟು ಬೇರೆ ವಿಷಯ ಮಾತನಾಡಲು ಹೇಳುತ್ತಿದ್ದೆ. ರಾಜಕಾರಣದಿಂದ ದೂರ ಸರಿಯಲು ಇಚ್ಛಿಸಿದ್ದೆ. ದೇವರ ಸಂಕಲ್ಪವಿದೆ. ಮತ್ತೆ ನಿಮ್ಮ ಮುಂದೆ ಬಂದು ನಿಂತಿರುವೆ
ಅನಂತಕುಮಾರ ಹೆಗಡೆ ಸಂಸದ ಉತ್ತರ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.